ನಟಿ ರನ್ಯಾ ರಾವ್
ನವದೆಹಲಿ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ಬೆನ್ನಲ್ಲೆ ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದವರ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಶನಿವಾರ ಎಫ್‌ಐಆರ್ ದಾಖಲಿಸಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣಗಳಿಗೆ ಸಂಬಂಧಿಸಿ ಡಿಆರ್‌ಐ ಜತೆಗೂಡಿರುವ ಸಿಬಿಐ ಅಧಿಕಾರಿಗಳು ಮುಂಬೈ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ‘ಪಿಟಿಐ’ ವರದಿ ಮಾಡಿದೆ.
ಮಾರ್ಚ್ 3ರಂದು ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ 33 ವರ್ಷದ ಕನ್ನಡ ನಟಿ ರನ್ಯಾ ರಾವ್ ಅವರನ್ನು ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ಇದೇ ವೇಳೆ ರನ್ಯಾ ಬಳಿ ಇದ್ದ ₹12.56 ಕೋಟಿ ಮೌಲ್ಯದ 14.2 ಕೆ.ಜಿ ಚಿನ್ನವನ್ನು ಜಪ್ತಿ ಮಾಡಿದ್ದರು.
ಪ್ರಕರಣ ಸಂಬಂಧ ರನ್ಯಾ ರಾವ್ ಅವರು ನೆಲಸಿದ್ದ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ ನಂದವಾಣಿ ಮ್ಯಾನ್ಶನ್ ಫ್ಲ್ಯಾಟ್ ಮೇಲೆ ದಾಳಿ ನಡೆಸಿದ್ದ ಡಿಆರ್‌ಐ ಅಧಿಕಾರಿಗಳು, ₹17.29 ಕೋಟಿ ಮೌಲ್ಯದ ಚಿನ್ನದ ಬಿಸ್ಕತ್‌ಗಳು ಮತ್ತು ನಗದನ್ನು ಜಪ್ತಿ ಮಾಡಿದ್ದರು.
'ನಾನು ಯುರೋಪ್, ಅಮೆರಿಕ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳುತ್ತಿದ್ದೆ. ಚಿನ್ನ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವುದು ನಿಜ’ ಎಂದು ರನ್ಯಾ ರಾವ್ ತಪ್ಪೊಪ್ಪಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.