ADVERTISEMENT

ಶಿಷ್ಟಾಚಾರ ವಿವಾದ: ಇಂದಿರಾ ಗಾಂಧಿ ನಡೆ ನೆನಪಿಸಿದ ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2023, 13:55 IST
Last Updated 29 ಆಗಸ್ಟ್ 2023, 13:55 IST
ಇಂದಿರಾ ಗಾಂಧಿ
ಇಂದಿರಾ ಗಾಂಧಿ   

ನವದೆಹಲಿ: ಶಿಷ್ಟಾಚಾರ ಕುರಿತು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಾಗ್ವಾದ ನಡೆಯುತ್ತಿರುವ ಬೆನ್ನಲ್ಲೇ ಎಂಬತ್ತರ ದಶಕದಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಪಾಲಿಸಿದ್ದ ಶಿಷ್ಟಾಚಾರದ ನಡೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ನೆನಪಿಸಿದ್ದಾರೆ.

1983ರಲ್ಲಿ ಶ್ರೀಹರಿಕೋಟಾದಲ್ಲಿ ಯಶಸ್ವಿಯಾಗಿ ಎಸ್‌ಎಲ್‌ವಿ–3–ಡಿ2 ರಾಕೆಟ್‌ ಉಡ್ಡಯನಗೊಂಡಿತ್ತು. ಇಂದಿರಾಗಾಂಧಿ ಅವರು, ರಾಜಕೀಯ ವೈರತ್ವದ ಕಹಿ ಮರೆತು ಆಂಧ್ರಪ್ರದೇಶದ ಅಂದಿನ ಮುಖ್ಯಮಂತ್ರಿಯಾಗಿದ್ದ ಎನ್‌.ಟಿ. ರಾಮರಾವ್‌ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು ಎಂದು ‘ಎಕ್ಸ್‌’ನಲ್ಲಿ (ಟ್ವಿಟರ್) ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಲೇಖಕ ವೇದ್ ಪ್ರಕಾಶ್ ಸ್ಯಾಂಡ್ಲಾಸ್ ಅವರು ಬರೆದಿರುವ ‘ದಿ ಲೀಪ್‌ಫ್ರೋಗರ್ಸ್: ಆನ್ ಇನ್‌ಸೈಡರ್ಸ್ ಅಕೌಂಟ್ ಆಫ್ ಇಸ್ರೊ’ ಪುಸ್ತಕವನ್ನು ಅವರು ಉಲ್ಲೇಖಿಸಿದ್ದಾರೆ.

ADVERTISEMENT

ಸ್ವಾಗತಿಸಲು ಬರದಂತೆ ಮನವಿ ಮಾಡಿದ್ದೆ: ಪ್ರಧಾನಿ ಮೋದಿ

ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ‘ಚಂದ್ರಯಾನ 3’ ಯಶಸ್ವಿಯಾದ್ದರಿಂದ ಇಸ್ರೊ ವಿಜ್ಞಾನಿಗಳಿಗೆ ಶುಭ ಕೋರಲು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಶಿಷ್ಟಾಚಾರದ ಪ್ರಕಾರ ಎಚ್‌ಎಎಲ್‌ ಏರ್‌ಪೋರ್ಟ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಆಹ್ವಾನ ನೀಡಿರಲಿಲ್ಲ ಎಂದು ಕಾಂಗ್ರೆಸ್‌ ಆಪಾದಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಮೋದಿ ಅವರು, ‘ಗ್ರೀಸ್‌ನಿಂದ ಬೆಂಗಳೂರಿಗೆ ಎಷ್ಟು ಹೊತ್ತಿಗೆ ತಲುಪುತ್ತೇವೆ ಎಂಬ ಬಗ್ಗೆ ಖಚಿತತೆ ಇರಲಿಲ್ಲ. ಹಾಗಾಗಿ, ನನ್ನನ್ನು ಆಹ್ವಾನಿಸುವುದಕ್ಕೋಸ್ಕರ ವಿಮಾನ ನಿಲ್ದಾಣದಲ್ಲಿ ಕಾಯುವ ತೊಂದರೆಗೆ ಸಿಲುಕಬಾರದೆಂದು ಸಿ.ಎಂ, ಡಿಸಿಎಂ ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದ್ದೆ’ ಎಂದು ‌ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.