ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಇಂದೋರ್: ಅಹಮದಾಬಾದ್ ವಿಮಾನ ದುರಂತದಲ್ಲಿ ಮಡಿದ ಒಬ್ಬೊಬ್ಬರದ್ದು ಒಂದೊಂದು ಕಥೆ. ಕನಸು, ಆಸೆ, ಖುಷಿಗಳನ್ನು ಹೊತ್ತು ವಿಮಾನ ಹತ್ತಿದ್ದ 241 ಮಂದಿ ಕ್ಷಣಮಾತ್ರದಲ್ಲಿ ಸುಟ್ಟು ಕರಕಲಾಗಿ ಹೋಗಿದ್ದಾರೆ.
ಪತಿಯ ಹುಟ್ಟುಹಬ್ಬವನ್ನು ಆಚರಿಸಲು ಲಂಡನ್‌ಗೆ ತೆರಳುತ್ತಿದ್ದ ಇಂದೋರ್‌ನ ಮಹಿಳೆಯೊಬ್ಬರ ಖುಷಿ ವಿಮಾನ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಬೂದಿಯಾಗಿದೆ.
ಬೆಂಗಳೂರಿನಲ್ಲಿ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ 28 ವರ್ಷದ ಹರ್‌ಪ್ರೀತ್ ಲಂಡನ್‌ನಲ್ಲಿರುವ ಗಂಡನ ಹುಟ್ಟು ಹಬ್ಬ ಆಚರಿಸಲು ವಿಮಾನ ಏರಿದ್ದರು. ಪತಿ ರಾಬಿ ಹೊರಾ ಕೂಡ ಹರ್‌ಪ್ರೀತ್ ಆಗಮನಕ್ಕಾಗಿ ಲಂಡನ್‌ನಲ್ಲಿ ಕಾಯುತ್ತಿದ್ದರು. ಆದರೆ ವಿಧಿಯ ಲೆಕ್ಕಾಚಾರ ಬೇರೆಯದೇ ಆಗಿತ್ತು.
ಹರ್‌ಪ್ರೀತ್ ಮೊದಲು ಜೂನ್ 19ರಂದು ಲಂಡನ್‌ಗೆ ಪ್ರಯಾಣಿಸಲು ಯೋಜನೆ ಹಾಕಿದ್ದರು. ಆದರೆ ಗಂಡನಿಗೆ ಹುಟ್ಟುಹಬ್ಬದ ಸರ್ಪ್ರೈಸ್ ನೀಡಲು ಜೂನ್ 12ಕ್ಕೆ ಪ್ರಯಾಣವನ್ನು ಮರು ನಿಗದಿ ಮಾಡಿದ್ದರು.
‘ಜೂನ್ 19ರಂದು ಲಂಡನ್‌ಗೆ ಹೋಗಲು ಅವಳು ಯೋಜನೆ ಹಾಕಿಕೊಂಡಿದ್ದಳು’ ಎಂದು ಅವರ ಸಹೋದರ ರಾಜೇಂದ್ರ ಸಿಂಗ್ ಹೊರಾ ಹೇಳುವಾಗ ಮುಖದಲ್ಲಿ ಹತಾಶ ಭಾವವಿತ್ತು.
‘ರಾಬಿಯ ಹುಟ್ಟುಹಬ್ಬವನ್ನು ಆಚರಿಸಲು ಅವಳು ದುರದೃಷ್ಟಕರ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದಳು. ದಂಪತಿ ಯುರೋಪ್ ಪ್ರವಾಸದ ಯೋಜನೆಯನ್ನೂ ಮಾಡಿದ್ದರು. ಎಲ್ಲವೂ ಕೆಲವೇ ಕೆಲವು ಸೆಕೆಂಡುಗಳಲ್ಲಿ ಬದಲಾಗಿ ಹೋಯಿತು’ ರಾಜೇಂದ್ರ ಸಿಂಗ್ ಕಣ್ಣಾಲಿಗಳು ತುಂಬಿದ್ದವು.
‘ಇದು ವಿಧಿ. ಎಲ್ಲಾ ಕನಸುಗಳು ಮತ್ತು ಭರವಸೆಗಳು ದುರಂತದಲ್ಲಿ ಮಾಯವಾಗಿವೆ. ಆಕಾಂಕ್ಷೆಗಳು ಹೇಗೆ ಛಿದ್ರವಾಗುತ್ತವೆ ಎನ್ನುವುದಕ್ಕೆ ಈ ದುರಂತವೇ ಸಾಕ್ಷಿ’ ಎಂದು ಇನ್ನೊಬ್ಬ ಸಂಬಂಧಿಕರು ದುಃಖ ತೋಡಿಕೊಂಡರು.
ಹರ್‌ಪ್ರೀತ್ ಲಂಡನ್‌ಗೆ ಹೋಗುವ ಮೊದಲು ಅಹಮದಾಬಾದ್‌ನಲ್ಲಿರುವ ತನ್ನ ಹೆತ್ತವರನ್ನು ಭೇಟಿ ಮಾಡಿದ್ದನ್ನು ಮಾವನ ಸಹೋದರ ನೆನಪಿಸಿಕೊಂಡರು. ‘ಇದು ಸಂತೋಷದ ಸಮಯವಾಗಬೇಕಿತ್ತು’ ಎಂದು ಅವರು ಕಣ್ಣೀರು ಸುರಿಸುತ್ತಾ ಹೇಳಿದರು.
‘ಅವಳು ವಿಮಾನ ಹತ್ತುವ ಮೊದಲು, ನಮ್ಮ ಕುಟುಂಬದ ವಾಟ್ಸಾಪ್ ಗುಂಪಿನಲ್ಲಿ ಅವಳ ಪ್ರವಾಸಕ್ಕಾಗಿ ನಾವೆಲ್ಲರೂ ಶುಭ ಹಾರೈಸಿದೆವು. ಅವಳು ಎಲ್ಲರಿಗೂ ಧನ್ಯವಾದ ಹೇಳಿದ್ದಳು. ಆಕೆ ತುಂಬಾ ಉತ್ಸುಕಳಾಗಿದ್ದಳು. ಲಂಡನ್‌ಗೆ ಹೋಗುವ ಬಗ್ಗೆ ಹರ್‌ಪ್ರೀತ್‌ಗೆ ತುಂಬಾ ಖುಷಿಯಲ್ಲಿದ್ದಳು. ಆದರೆ ವಿಮಾನ ಹಾರಿದ ಕೆಲವೇ ಕ್ಷಣಗಳಲ್ಲಿ ಎಲ್ಲವೂ ಬದಲಾಯಿತು. ನಾವು ಆಕೆಯನ್ನು ಕಳೆದುಕೊಂಡೆವು’ ಅವರು ಗದ್ಗದಿತರಾದರು.
ಈ ವಿಮಾನ ಅಪಘಾತದ ಕಾರಣವನ್ನು ತನಿಖೆ ಮಾಡಬೇಕು ಎಂದು ಅವರು ಅಗ್ರಹಿಸಿದರು.
ಇದು ಹೇಗೆ ಸಂಭವಿಸಿತು ಎಂದು ನಾವು ಮತ್ತು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಈ ದುರಂತದಲ್ಲಿ ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿವೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.