
ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜನೆಗೊಂಡಿರುವ ಎಐ ಶೃಂಗದಲ್ಲಿ ಪಾಲ್ಗೊಂಡ ಜನ
ಪಿಟಿಐ ಚಿತ್ರ
ನವದೆಹಲಿ: ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಮುಖ ಕಂಪನಿಗಳು, ಜಾಗತಿಕ ನಾಯಕರನ್ನು ಒಂದೆಡೆ ಕರೆತರಲಿರುವ ‘ಎ.ಐ. ಇಂಪ್ಯಾಕ್ಟ್ ಶೃಂಗ’ದ ಆಯೋಜನೆಯಲ್ಲಿ ಉಂಟಾಗಿರುವ ಲೋಪಗಳಿಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಕ್ಷಮೆ ಕೋರಿದ್ದಾರೆ.
ರಾಷ್ಟ್ರ ರಾಜಧಾನಿಯ ಭಾರತ ಮಂಟಪದಲ್ಲಿ ಈ ಶೃಂಗ ಆಯೋಜನೆಗೊಂಡಿದೆ. ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರಾನ್ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ದಿಗ್ಗಜರು ಇದರಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅತಿಯಾದ ದಟ್ಟಣೆಯಿಂದ ಕಾರ್ಯಕ್ರಮದಲ್ಲಿ ಗೊಂದಲ ಉಂಟಾಗಿತ್ತು. ಇದು ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಕಳಪೆ ನಿರ್ವಹಣೆಗೆ ವಿರೋಧ ಪಕ್ಷಗಳು ವ್ಯಾಪಕ ಟೀಕೆ ನಡೆಸಿದ್ದವು.
ಆಯೋಜಕರು ಸುಮಾರು ಹತ್ತು ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇತ್ತು. ಇದರಲ್ಲಿ ಜಾಗತಿಕ ಗಣ್ಯರು, ದೇಶದ ಪ್ರಮುಖರು, ಕೆಲ ಕಂಪನಿಗಳ ಮುಖ್ಯಸ್ಥರು, ವಿದ್ಯಾರ್ಥಿಗಳಿಗೆ ಆಹ್ವಾನವಿತ್ತು. ಆದರೆ ನಿರೀಕ್ಷೆಗೂ ಮೀರಿ ಜನರು ಬಂದಿದ್ದರಿಂದ ಕಾರ್ಯಕ್ರಮ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಪ್ರವೇಶ ವ್ಯವಸ್ಥೆಯೇ ಸರಿಯಾಗಿರಲಿಲ್ಲ ಎಂದು ಕೆಲವರು ಆರೋಪಿಸಿದ್ದು ವರದಿಯಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಅಶ್ವಿನಿ ವೈಷ್ಣವ್, ‘ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಗೊಂದಲವಾಗಿದ್ದಲ್ಲಿ ಅದಕ್ಕೆ ಕ್ಷಮೆ ಕೋರುತ್ತೇನೆ. ಇದನ್ನು ತಕ್ಷಣ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.
‘ಜಗತ್ತಿನಲ್ಲೇ ಅತಿ ದೊಡ್ಡ ಎಐ ಶೃಂಗ ಇದು. ಅದ್ಭುತ ಪ್ರತಿಕ್ರಿಯೆ ಲಭ್ಯವಾಗಿದೆ. ವದಂತಿಗಳಿಗೆ ಕಿವಿಗೊಡಬೇಡಿ. ಲ್ಯಾಪ್‌ಟಾಪ್‌ಗಳನ್ನು ತರಲು ನಿರ್ಬಂಧವಿದೆ ಎಂದು ಹರಿದಾಡುತ್ತಿದೆ. ಆದರೆ ಸುಳ್ಳು ಮಾಹಿತಿ’ ಎಂದಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, ‘ಎಐ ಶೃಂಗ ಎಂಬ ಪ್ರಚಾರ ಕಾರ್ಯಕ್ರಮವನ್ನು ಕೇಂದ್ರ ಆಯೋಜಿಸಿದೆ. ಇಲ್ಲಿ ಭಾರತದ ಮಾಹಿತಿ ಮಾರಾಟಕ್ಕಿದೆ. ಚೀನಾದ ಉತ್ಪನ್ನಗಳು ವ್ಯಾಪಕ ಪ್ರದರ್ಶನ ಕಾಣುತ್ತಿದೆ’ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.