
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ 'ಎಐ ಇಂಪ್ಯಾಕ್ಟ್' ಸಮಾವೇಶದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಗ್ರೂಪ್ ಫೋಟೊ ತೆಗೆಸಿಕೊಳ್ಳುವಾಗ ಮುಜುಗರದ ಪ್ರಸಂಗ ಎದುರಾಯಿತು ಎಂದು 'ಒಪನ್ ಎಐ' ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಮ್ ಆಲ್ಟ್‌ಮನ್ ಗುರುವಾರ ಹೇಳಿದ್ದಾರೆ.
ನವದೆಹಲಿಯಲ್ಲಿರುವ ಭಾರತ ಮಂಟಪಮ್‌ನಲ್ಲಿ ನಡೆದ ಎಐ ಸಮಾವೇಶದ ಉದ್ಘಾಟನಾ ಸಮಾರಂಭದ ಬಳಿಕ, ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಮೋದಿ ಅವರೊಂದಿಗೆ ಗ್ರೂಫ್ ಫೋಟೊ ತೆಗೆಸಿಕೊಳ್ಳಲು ವೇದಿಕೆ ಏರಿದ್ದರು. ಆಲ್ಟ್‌ಮನ್, 'ಆಂಥ್ರೊಪಿಕ್'ನ ಸಿಇಒ ಡೇರಿಯೊ ಅಮೋಡೆ, 'ಗೂಗಲ್' ಸಿಇಒ ಸುಂದರ್ ಪಿಚೈ, 'ಮೆಟಾ' ಕಂಪನಿಯ ಮುಖ್ಯ ಎಐ ಅಧಿಕಾರಿ ಅಲೆಕ್ಸಾಂಡರ್ ವಾಂಗ್, 'ಸರ್ವಂ ಎಐ' ಸಹ ಸಂಸ್ಥಾಪಕ ಪ್ರತ್ಯೂಷ್ ಕುಮಾರ್, 'ಗೂಗಲ್ ಡೀಪ್‌ಮೈಂಡ್' ಸಿಇಒ ಡೆಮಿಸ್ ಹಸ್ಸಾಬಿಸ್ ಸೇರಿದಂತೆ ಮತ್ತಷ್ಟು ಮಂದಿ ಇದ್ದರು.
ಮೋದಿ ಅವರು ಮಧ್ಯದಲ್ಲಿ, ಅವರ ಬಲ ಭಾಗದಲ್ಲಿ ಪಿಚೈ ಮತ್ತು ಎಡಗಡೆ ಆಲ್ಟ್‌ಮನ್ ಇದ್ದರು. ಈ ಹಿಂದೆ 'ಓಪನ್ ಎಐ' ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಹಾಗೂ ಈಗ 'ಆಂಥ್ರೊಪಿಕ್' ಸಿಇಒ ಆಗಿರುವ ಅಮೋಡೆ ಅವರು ಆಲ್ಟ್‌ಮನ್ ಪಕ್ಕದಲ್ಲಿ ನಿಂತಿದ್ದರು.
ಕ್ಯಾಮೆರಾಗಳು ಫೋಟೊ ಕ್ಲಿಕ್ಕಿಸಲಾರಂಭಿಸುತ್ತಿದ್ದಂತೆ ಪ್ರಧಾನಿ ಮೋದಿ ಅವರು, ಒಗ್ಗಟ್ಟು ಪ್ರದರ್ಶನದ ಸಂಕೇತವಾಗಿ, ಪಿಚೈ ಹಾಗೂ ಆಲ್ಟ್‌ಮನ್ ಅವರ ಕೈಗಳನ್ನು ಏಕಾಏಕಿ ಮೇಲೆತ್ತಿದ್ದರು. ಈ ವೇಳೆ ಅವರಿಬ್ಬರೂ, ಗೊಂದಲಕ್ಕೀಡಾದರು. ನಂತರ ಎಲ್ಲರೂ ಒಬ್ಬರ ಕೈ ಮತ್ತೊಬ್ಬರು ಹಿಡಿದು ಕ್ಯಾಮೆರಾಗೆ ಪೋಸ್ ನೀಡಿದರು. ಆದರೆ, ಆಲ್ಟ್‌ಮನ್ ಮತ್ತು ಅಮೋಡೆ ಮಾತ್ರ ಪರಸ್ಪರ ಕೈ ಹಿಡಿಯಲಿಲ್ಲ. ಬದಲಾಗಿ, ಹಾಗೇ ಮೇಲೆತ್ತಿ ಪೋಸ್ ನೀಡಿದರು.
ಆ ಸಂದರ್ಭದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸಕತ್ ಟ್ರೋಲ್ ಆಗುತ್ತಿದೆ. ಕೆಲವರು, ಮೋದಿ ಅವರ ಕಾಲೆಳೆದಿದ್ದಾರೆ.
ಆ ಕುರಿತು ಮಾತನಾಡಿರುವ ಆಲ್ಟ್‌ಮನ್, 'ಏನಾಗುತ್ತಿದೆ ಎಂಬುದೇ ಗೊತ್ತಾಗಲಿಲ್ಲ. ನಾನು ಒಂದು ರೀತಿ ಗೊಂದಲಕ್ಕೊಳಗಾದೆ. ಮೋದಿ ಅವರು ನನ್ನ ಕೈ ಹಿಡಿದು ಮೇಲೆತ್ತಿದರು. ಆಗ ನಾವೇನು ಮಾಡಬೇಕೆಂಬುದೇ ಗೊತ್ತಿರಲಿಲ್ಲ' ಎಂದು ಹೇಳಿದ್ದಾರೆ.
ಆಲ್ಟ್‌ಮನ್ ಹಾಗೂ ಅಮೋಡೆ ಅವರು ಈ ಹಿಂದೆ, ಅಂದರೆ 2019ರವರೆಗೆ OpenAIನಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದರು. ಆದರೆ, ಕಂಪನಿಯ ಕಾರ್ಯಾಚರಣೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದ ಪರಿಣಾಮ ಅಮೋಡೆ, ಅವರ ಸಹೋದರಿ ಡೇನಿಯೆಲಾ ಹಾಗೂ ಕೆಲ ಹಿರಿಯ ಸಂಶೋಧಕರು 2020ರಲ್ಲಿ OpenAIನಿಂದ ಹೊರನಡೆದರು. ಆ ಗುಂಪು ನಂತರ, Anthropic ಸ್ಥಾಪಿಸಿತು.
ಹೀಗಾಗಿ, ಈ ಎರಡೂ ಕಂಪನಿಗಳು ಉದ್ಯಮದಲ್ಲಿ ಪ್ರಬಲ ಪ್ರತಿಸ್ಪರ್ಧಿಗಳಾಗಿ ಮುನ್ನಡೆಯುತ್ತಿವೆ. ಆಲ್ಟ್‌ಮನ್ ಹಾಗೂ ಅಮೋಡೆ ನಡುವಣ ವೈರತ್ವ, ವೈಮನಸ್ಸು ಮುಂದುವರಿದಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.