ADVERTISEMENT

AIಗೆ ಕೌಶಲವಿದೆ, ಕಲೆಯಿಲ್ಲ; ಮನುಷ್ಯರ ಭಾವನೆಯ ಅಭಿವ್ಯಕ್ತಿ ಅಸಾಧ್ಯ: ಚೇತನ್ ಭಗತ್

ಪಿಟಿಐ
Published 6 ಅಕ್ಟೋಬರ್ 2025, 6:44 IST
Last Updated 6 ಅಕ್ಟೋಬರ್ 2025, 6:44 IST
<div class="paragraphs"><p>ಚೇತನ್ ಭಗತ್ ಮತ್ತು ತೆಹಸೀನ್ ಪೂನಾವಾಲಾ</p></div>

ಚೇತನ್ ಭಗತ್ ಮತ್ತು ತೆಹಸೀನ್ ಪೂನಾವಾಲಾ

   

ಪಿಟಿಐ ಚಿತ್ರ

ಪುಣೆ: ಕೃತಕ ಬುದ್ಧಿಮತ್ತೆಯು (AI) ಕಾದಂಬರಿ ಕ್ಷೇತ್ರವನ್ನೂ ಒಳಗೊಂಡು ಬರಹಗಾರರ ಸೃಜನಶೀಲತೆಗೆ ಸವಾಲೊಡ್ಡುವ ಮೂಲಕ ಅವರ ಕ್ಷೇತ್ರವನ್ನು ಕಸಿದುಕೊಳ್ಳಲಿದೆ ಎಂಬ ಆತಂಕವನ್ನು ಕೃತಿ ರಚನೆಕಾರ ಚೇತನ್ ಭಗತ್ ತಳ್ಳಿಹಾಕಿದ್ದಾರೆ.

ADVERTISEMENT

‘ಕೃತಕ ಬುದ್ಧಿಮತ್ತೆಯು ಕೇವಲ ಕೌಶಲವನ್ನು ಹೊಂದಿದೆಯೇ ಹೊರತು, ಕಲೆಯನ್ನಲ್ಲ. ಈ ಯಾಂತ್ರಿಕ ಸಲಕರಣೆಯು ನೈಜ ಭಾವನೆಗಳಿಗೆ ಅಕ್ಷರ ರೂಪ ನೀಡಲು ಸಾಧ್ಯವಿಲ್ಲ. ಇಂಥ ಕ್ರಿಯಾಶೀಲತೆಯು ಏನಿದ್ದರೂ ಮನುಷ್ಯ ತನ್ನ ಅನುಭವದ ಮೂಸೆಯಲ್ಲೇ ದಾಖಲಿಸಲು ಸಾಧ್ಯ. ಅದಕ್ಕೆ ಯಾವುದೇ ಪರ್ಯಾಯವಿಲ್ಲ’ ಎಂದಿದ್ದಾರೆ.

ತಮ್ಮ ಹೊಸ ಕೃತಿ ‘12 ಇಯರ್ಸ್‌: ಮೈ ಮೆಸ್ಡ್‌ ಅಪ್‌ ಲವ್‌ ಸ್ಟೋರಿ’ ಎಂಬ ಕೃತಿ ಬಿಡುಗಡೆ ಸಂದರ್ಭದಲ್ಲಿ ತಮ್ಮ ಸಂದರ್ಶನ ನಡೆಸಿದ ಬಿಜೆಪಿ ವಕ್ತಾರ ತೆಹಸೀನ್ ಪೂನಾವಾಲಾ ಅವರೊಂದಿಗಿನ ಸಂವಾದದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಕೃತಕ ಬುದ್ಧಿಮತ್ತೆ ಅಥವಾ ಚಾಟ್‌ಜಿಪಿಟಿ ಲೇಖಕನಾಗಿ ನನ್ನ ವೃತ್ತಿಯ ಮೇಲೆ ಪರಿಣಾಮ ಬೀರಲಿದೆಯೇ ಎಂದು ಹಲವರು ಕೇಳುತ್ತಾರೆ. ಅದಕ್ಕೆ ‘ಇಲ್ಲ’ ಎಂಬುದಷ್ಟೇ ನನ್ನ ಉತ್ತರ. ಅದರಲ್ಲೂ ಕಾದಂಬರಿ ಕ್ಷೇತ್ರದಲ್ಲಿ ಇದು ಸಾಧ್ಯವಿಲ್ಲ. ಅಧಿಕೃತ ಬರವಣಿಗೆಯ ಬೇರು ಬದುಕಿನ ಅನುಭವಗಳಲ್ಲಿ ಹಾಸುಹೊಕ್ಕಾಗಿದೆ’ ಎಂದಿದ್ದಾರೆ.

‘ಹೃದಯ ಛಿದ್ರಗೊಂಡ ನೋವನ್ನುಂಡವರು ಮಾತ್ರ ಆ ನೋವು ಏನೆಂಬುದನ್ನು ಅಭಿವ್ಯಕ್ತಿಗೊಳಿಸಲು ಸಾಧ್ಯ. ಚಾಟ್‌ಜಿಪಿಟಿಗೆ ಬಾಲ್ಯದಲ್ಲಿ ಅನುಭವಿಸಿದ ಆಘಾತಗಳ ಅನುಭವವಿಲ್ಲ. ಆದರೆ, ಅದು ನನಗಿದೆ. ನನ್ನ ಪ್ರೀತಿ ಮುರಿದುಬಿದ್ದಿದೆ. ನಾನು ಪ್ರೀತಿಯನ್ನು ಅನುಭವಿಸಿದ್ದೇನೆ. ನನ್ನ ಬಾಲ್ಯ ಏರಿಳಿತ ಕಂಡಿದೆ. ಆ ಎಲ್ಲಾ ನೈಜ ಅನುಭವಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಿ ಓದುಗರಿಗೆ ನೀಡಿದ್ದೇನೆ. ನಮ್ಮ ಬಗ್ಗೆ ನಮಗೇನೂ ಅನಿಸುತ್ತಿಲ್ಲವೆಂದರೆ ಕಾದಂಬರಿಗಳು ಓದಿಸಿಕೊಳ್ಳದು’ ಎಂದು ಚೇತನ್ ಹೇಳಿದ್ದಾರೆ.

‘ಕಥೆ ಎಂಬುದೇ ಮನುಷ್ಯ ಸಂಬಂಧಗಳಲ್ಲಿದೆ. ಜನರು ಜನರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ನಾವು ಮಾತನಾಡುವುದೇ ಅದೇ ಕಾರಣಕ್ಕಾಗಿ. ಮಾತುಕತೆಗಳೂ ಭಿನ್ನ ರೀತಿಯಲ್ಲಿರುತ್ತವೆ. ಇಬ್ಬರು ವ್ಯಕ್ತಿಗಳ ಸ್ಥಾನಗಳನ್ನು ರೊಬೊಗಳು ಆವರಿಸಿಕೊಂಡರೆ, ಅವುಗಳು ಪರಮಾಣು ವಿಜ್ಞಾನದಿಂದ ಹಿಡಿದು, ಬಾಹ್ಯಾಕಾಶ, ರಾಜಕೀಯ ಕುರಿತು ಮಾತನಾಡಬಹುದು. ಆದರೆ ಅದನ್ನು ಕೇಳಿಸಿಕೊಳ್ಳುವವರು ಯಾರು’ ಎಂದು ಪ್ರಶ್ನಿಸಿದ್ದಾರೆ.

ಸೃಜನಶೀಲ ಬರವಣಿಗೆಗೆ ಕೃತಕ ಬುದ್ಧಿಮತ್ತೆ ಸವಾಲಾಗಬಹುದೇ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ ಚೇತನ್ ಭಗತ್, ‘AI ರಚಿಸಿದ ಒಂದು ಪುಸ್ತಕವಾದರೂ ಇದೆಯೇ ಹೇಳಿ? ಕೃತಕ ಬುದ್ಧಿಮತ್ತೆಗಳು ಏನಿದ್ದರೂ ಆಡಳಿತಾತ್ಮಕ ಕೆಲಸಗಳಲ್ಲಿ ನೆರವಾಗಬಹುದು. ಆದರೆ ಬರವಣಿಗೆಯಲ್ಲಿ ಸಹಜ ಭಾವನೆಯನ್ನು ಎಂದಿಗೂ ಅವುಗಳಿಗೆ ಅಭಿವ್ಯಕ್ತಗೊಳಿಸಲು ಸಾಧ್ಯವಿಲ್ಲ. ಒಂದೊಮ್ಮೆ ಮತ್ತೊಬ್ಬರ ಭಾವನೆಯನ್ನು ಅನುಕರಿಸಲು ಕೃತಕ ಬುದ್ಧಿಮತ್ತೆ ಯಂತ್ರಗಳು ಆರಂಭಿಸಿದರೂ, ಪ್ರೇಕ್ಷಕರ ಕಣ್ಣಿಗೆ ಅವು ಸಹಜವೆನಿಸದು’ ಎಂದಿದ್ದಾರೆ.

‘ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆಯ ಬಾಟ್‌ಗಳು ಮನುಷ್ಯನ ಭಾವನೆಗಳನ್ನೂ ಅನುಕರಿಸಲು ಕಲಿಯುತ್ತವೆ. ಕೃತಿಯೊಂದನ್ನು ಎಐ ಸೃಷ್ಟಿಸಿದೆ ಎಂದು ಗೊತ್ತಾದರೆ, ಜನರು ಓದುವುದನ್ನೂ ಮತ್ತು ಎಐ ಆಧಾರಿತ ಸಿನಿಮಾ ನೋಡುವುದನ್ನೂ ನಿಲ್ಲಿಸುತ್ತಾರೆ. ಕ್ರಿಯಾಶೀಲತೆ ಎನ್ನುವುದು ಮನುಷ್ಯರ ಅನುಭವಗಳಿಂದ ಪಡೆದದ್ದೇ ವಿನಃ ಅದನ್ನು ತ್ವರಿತವಾಗಿ ಉತ್ತರ ನೀಡುವ ಕೃತಕ ಬುದ್ಧಿಮತ್ತೆಗಳು ಆ ಸ್ಥಾನ ತುಂಬಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಹೊಸ ಕೃತಿಯ ಕುರಿತು ಮಾಹಿತಿ ಹಂಚಿಕೊಂಡ ಭಗತ್, ‘33 ವರ್ಷದ ವಿಚ್ಛೇದಿತ ಪುರುಷ ಹಾಗೂ 21 ವರ್ಷದ ಮಹಿಳೆ ನಡುವಿನ ಪ್ರಯಣದ ಕಥಾವಸ್ತುವನ್ನು ಈ ಕಾದಂಬರಿ ಹೊಂದಿದೆ. ಜೆನ್‌ ಝೀ ಮತ್ತು ಮಿಲೇನಿಯಲ್‌ ತಲೆಮಾರಿಗೂ ಹೊಂದಬಹುದಾದ ಸಂಬಂಧಗಳ ನಡುವಿನ ಸಂಕೀರ್ಣತೆಯನ್ನು ಈ ಕಾದಂಬರಿ ಆಧರಿಸಿದೆ. ಮಿಲೇನಿಯಲ್ಸ್ ಪ್ರತಿನಿಧಿಸುವ ಪುರುಷನೇ ಈ ಕಥೆಯ ನಾಯಕ. ವಯಸ್ಸಿನ ಅಂತರ ಏನೆಲ್ಲಾ ಅವಾಂತರ ಸೃಷ್ಟಿಸುತ್ತದೆ ಎಂಬುದು ಕಥೆಯ ಹೂರಣ’ ಎಂದು ವಿವರಿಸಿದ್ದಾರೆ.

‘ನನ್ನ ಹಿಂದಿನ ಕೃತಿಗಳಾದ ‘2 ಸ್ಟೇಟ್ಸ್‌: ದ ಸ್ಟೋರಿ ಆಫ್‌ ಮೈ ಮ್ಯಾರೇಜ್‌’ ಮತ್ತು ‘ಹಾಫ್‌ ಗರ್ಲ್‌ಫ್ರೆಂಡ್‌’ ರಚನೆಗೊಂಡು 10 ವರ್ಷಗಳ ನಂತರ ಈ ಕೃತಿ ಹೊರಬರುತ್ತಿದೆ. ಇದು ನನ್ನ ಅತ್ಯಂತ ಮೆಚ್ಚಿನ ಕೃತಿಯಾಗಿದೆ. ಹಾಸ್ಯ, ಭಾವುಕ ಸನ್ನಿವೇಶ, ಚಿಂತನೆಗೆ ದೂಡುವ ಮತ್ತು ಎಲ್ಲಾ ರೀತಿಯ ಭಾವನೆಗಳಿಗೆ ಕನ್ನಡಿಯಾಗಿ, ಎದುರಾಗುವ ಹಲವು ಪ್ರಶ್ನೆಗಳಿಗೆ ಇದು ಉತ್ತರ ನೀಡಲಿದೆ. ನಮ್ಮೊಂದಿಗಿರುವವರಲ್ಲೇ ಒಬ್ಬರು ನಮ್ಮ ಬದುಕಿನ ಅತ್ಯಂತ ಪ್ರಮುಖರು ಎಂದು ಹೇಗೆ ಅರಿಯುತ್ತೀರಿ ಎಂಬ ಪ್ರಶ್ನೆಗೂ ಈ ಕೃತಿಯಲ್ಲಿ ಉತ್ತರವಿದೆ‘ ಎಂದು ಚೇತನ್ ಭಗತ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.