ADVERTISEMENT

ಎಐಎಡಿಎಂಕೆ ವಿರುದ್ಧ ಚುನಾವಣೆ ಅಕ್ರಮ ಆರೋಪ: ಹೋರಾಟಕ್ಕೆ ಅಣಿಯಾದ ಸ್ಟಾಲಿನ್‌

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 14:50 IST
Last Updated 2 ಜನವರಿ 2020, 14:50 IST
   

ಚೆನ್ನೈ: ತಮಿಳುನಾಡಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಚುನಾವಣೆ ಫಲಿತಾಂಶಗಳು ಪ್ರಕಟವಾಗಲು ಬಿಡದೇ ಆಡಳಿತಾರೂಢ ಎಐಎಡಿಎಂ ಪಕ್ಷ ಡಿಎಂಕೆಯ ವಿಜಯದ ಫಲಿತಾಂಶ ತಡೆಯುವ ಷಡ್ಯಂತ್ರ ಮಾಡುತ್ತಿದೆ ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್‌ ಆರೋಪಿಸಿದ್ದಾರೆ.

ಸಾಲೆಮ್‌ ಕ್ಷೇತ್ರದ ಫಲಿತಾಂಶ ಉಲ್ಲೇಖಿಸಿ ಮಾತನಾಡಿದ ಸ್ಟಾಲಿನ್‌, ‘ಕ್ಷೇತ್ರದ ಮತ ಎಣಿಕೆ ಕಾರ್ಯ ಮುಗಿದಿದ್ದರೂ ಈ ವರೆಗೆ ಫಲಿತಾಂಶ ಪ್ರಕಟಿಸಿಲ್ಲ. ಎಐಎಡಿಎಂಕೆ ಗೆದ್ದಿರುವ ಕಡೆಗಳಲ್ಲಿ ಮಾತ್ರ ಫಲಿತಾಂಶ ನೀಡಲಾಗಿದೆ. ಇನ್ನೂ ಕೆಲವೆಡೆ ಡಿಎಂಕೆ ಮುಖಂಡರನ್ನು ಹೊರಗಿಟ್ಟು ಎಐಎಡಿಎಂಕೆ ಮುಖಂಡರ ಸಮ್ಮುಖದಲ್ಲಿ ಮತ ಎಣಿಕೆ ಮಾಡಲಾಗಿದೆ. ಇನ್ನೊಂದು ಮತಗಟ್ಟೆಯಲ್ಲಿ ಮೂರು ಮತಪೆಟ್ಟಿಗೆಗಳು ನಾಪತ್ತೆಯಾಗಿವೆ,’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಲೆಮ್‌ ಕ್ಷೇತ್ರವು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಪ್ರತಿನಿಧಿಸುವ ಪ್ರತಿಷ್ಠಿತ ಕ್ಷೇತ್ರ.

ADVERTISEMENT

ಈ ಮಧ್ಯೆ ಸ್ಟಾಲಿನ್‌ ಅವರು ರಾಜ್ಯ ಚುನಾವಣಾ ಆಯುಕ್ತರನ್ನು ಭೇಟಿಯಾದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಯೋಗವು ಸಮಸ್ಯೆ ಬಗೆಹರಿಸುವ ಭರವಸೆ ನೀಡಿರುವುದಾಗಿ ತಿಳಿಸಿದರು. ‘ನನ್ನ ದೂರಿನ ಸಂಬಂಧ ಚುನಾವಣೆ ಆಯೋಗ ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಪ್ರತಿಭಟನೆ ನಡೆಸಲಾಗುವುದು,’ ಎಂದೂ ಅವರು ಹೇಳಿದರು.

‘ಡಿಎಂಕೆ ಜಯ ತಡೆಯಲು ಆಡಳಿತಾರೂಢ ಎಐಎಡಿಎಂಕೆ ಕುತಂತ್ರ ಮಾಡುತ್ತಿದೆ. ಚುನಾವಣೆ ಅಕ್ರಮದ ಕುರಿತು ನಾವು ಕೋರ್ಟ್‌ ಮೊರೆ ಹೋಗುತ್ತಿದ್ದೇವೆ. ಮುಂದಿನ ಹೋರಾಟಗಳ ಬಗ್ಗೆ ಚರ್ಚಿಸಿ ನಿರ್ಧಾರ ಪ್ರಕಟಿಸಲಾಗುವುದು,’ ಎಂದು ತಿಳಿಸಿದರು. ಇನ್ನೊಂದೆಡೆ ಡಿಎಂಕೆ ಸಲ್ಲಿಸಿದಅರ್ಜಿ ಮಾನ್ಯ ಮಾಡಿರುವ ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ.

ಘಟನೆ ಹಿನ್ನೆಲೆಯಲ್ಲಿ ಆದೇಶ ನೀಡಿರುವ ಮದ್ರಾಸ್‌ ಹೈಕೋರ್ಟ್‌ ಮತ ಎಣಿಕೆ ಪ್ರಕ್ರಿಯೆಯನ್ನು ಚಿತ್ರೀಕರಣ ಮಾಡುವಂತೆ ಚುನಾವಣೆ ಆಯೋಗಕ್ಕೆ ಸೂಚಿಸಿದೆ.

ತಮಿಳುನಾಡಿನ 5090 ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ಚುನಾವಣೆಯ ಈ ವರೆಗಿನ ಪ್ರಕಟಿತ ಫಲಿತಾಂಶದಲ್ಲಿ ಡಿಎಂಕೆ 77ರಲ್ಲಿ, ಎಐಎಡಿಎಂಕೆ 64ರಲ್ಲಿ ಗೆದ್ದಿದೆ.

ಕಳೆದ ವರ್ಷ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ತಮಿಳುನಾಡಿನ 38 ಲೋಕಸಭೆ ಕ್ಷೇತ್ರಗಳ ಪೈಕಿ 37 ಕ್ಷೇತ್ರಗಳಲ್ಲಿ ಗೆದ್ದಿತ್ತು.

ಸದ್ಯದ ಮಾಹಿತಿ ಪ್ರಕಾರ ಸ್ಟಾಲಿನ್‌ ಅವರು ಚುನಾವಣೆ ಆಯೋಗದ ವಿರುದ್ಧ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಚೆನ್ನೈನ ಕಚೇರಿ ಎದುರು ದರಣಿ ಕೂರಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.