ADVERTISEMENT

ಭಾರತ ಜೂನ್–ಜುಲೈನಲ್ಲಿ ಗರಿಷ್ಠ ಕೋವಿಡ್–19 ಪ್ರಕರಣ ಕಾಣಲಿದೆ: ಏಮ್ಸ್ ನಿರ್ದೇಶಕ

ಏಜೆನ್ಸೀಸ್
Published 7 ಮೇ 2020, 13:10 IST
Last Updated 7 ಮೇ 2020, 13:10 IST
ಕೊರೊನಾ ವೈರಸ್‌ ಸೋಂಕು– ಸಾಂಕೇತಿಕ ಚಿತ್ರ
ಕೊರೊನಾ ವೈರಸ್‌ ಸೋಂಕು– ಸಾಂಕೇತಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಕೋವಿಡ್‌–19 ಪ್ರಕರಣಗಳು ಜೂನ್‌–ಜುಲೈನಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಲಿವೆ ಎಂದು ದೆಹಲಿ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ನಿರ್ದೇಶಕ ಡಾ.ರಣದೀಪ್‌ ಗುಲೆರಿಯಾ ಹೇಳಿದ್ದಾರೆ.

ದೇಶದಲ್ಲಿ ಮಾರ್ಚ್‌ 25ರಿಂದ ಮೇ 7ರ ವರೆಗೂ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 53,000 ದಾಟಿದೆ.

'ಸ್ವೀಕೃತ ಮಾದರಿಯ ಮಾಹಿತಿ ಹಾಗೂ ಏರಿಕೆಯಾಗುತ್ತಿರುವ ಪ್ರಕರಣಗಳ ಆಧಾರದ ಮೇಲೆ ಜೂನ್‌ ಮತ್ತು ಜುಲೈನಲ್ಲಿ ಗರಿಷ್ಠ ಮಟ್ಟ ತಲುಪಲಿದೆ. ಸಮಯ ಸರಿದಂತೆ ಸ್ಪಷ್ಟತೆ ಸಿಗಲಿದೆ ಹಾಗೂ ಲಾಕ್‌ಡೌನ್‌ ವಿಸ್ತರಣೆ ಪರಿಣಾಮದ ಬಗ್ಗೆ ತಿಳಿಯಲಿದೆ' ಎಂದಿರುವುದಾಗಿ ಎಎನ್‌ಐ ವರದಿ ಮಾಡಿದೆ.

ADVERTISEMENT

ಕೊರೊನಾ ವೈರಸ್‌ಗೆ ಲಸಿಕೆ ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಸೋಂಕು ನಿಯಂತ್ರಣಕ್ಕೆ ಸರ್ಕಾರ ಲಾಕ್‌ಡೌನ್‌ ತಂತ್ರವನ್ನು ಅನುಸರಿಸಿದೆ. ಮಾರ್ಚ್‌ 25ರಂದು ಲಾಕ್‌ಡೌನ್‌ ಮೊದಲ ದಿನ, ಭಾರತದಲ್ಲಿ ದಾಖಲಾಗಿದ್ದ ಒಟ್ಟು ಕೋವಿಡ್‌–19 ಪ್ರಕರಣಗಳು 600 ಮಾತ್ರ. ಸೋಂಕಿನಿಂದ 13 ಜನರು ಸಾವಿಗೀಡಾಗಿದ್ದರು.

ಲಾಕ್‌ಡೌನ್‌ ಆರಂಭವಾಗಿ 43ನೇ ದಿನ, ಗುರುವಾರ ದೇಶದಲ್ಲಿ ಕೋವಿಡ್‌–19 ಪ್ರಕರಣಗಳು 53,000 ಮುಟ್ಟಿದೆ. ಸೋಂಕಿನಿಂದ 1,800 ಮಂದಿ ಮೃತಪಟ್ಟಿದ್ದಾರೆ. 36,000ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಸುಮಾರು 15,000 ಮಂದಿ ಗುಣಮುಖರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಸೋಂಕು ಪ್ರಕರಣಗಳು 17,000 ಮುಟ್ಟಿವೆ. ಗುಜರಾತ್‌ನಲ್ಲಿ 6,500ಕ್ಕಿಂತ ಅಧಿಕ ಪ್ರಕರಣಗಳು, ದೆಹಲಿಯಲ್ಲಿ 5,500ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ ಅತಿ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ ಹಾಗೂ ಸೋಂಕು ಹೊಂದಿದವರ ಪೈಕಿ ಕಡಿಮೆ ಜನ ಸಾವಿಗೀಡಾಗಿದ್ದಾರೆ. ಸಿಕ್ಕಿಂ ಒಂದರಲ್ಲಿಯೇ ಈವರೆಗೂ ಒಂದೂ ಕೋವಿಡ್‌–19 ಪ್ರಕರಣ ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.