ADVERTISEMENT

ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಕೋರ್ಟ್‌ಗೆ ಮೊರೆ: ಎಐಎಂಪಿಎಲ್‌ಬಿ

‘ಕರಾಳ ಕಾನೂನು’ ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆ

ಪಿಟಿಐ
Published 2 ಏಪ್ರಿಲ್ 2025, 15:37 IST
Last Updated 2 ಏಪ್ರಿಲ್ 2025, 15:37 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ವಕ್ಫ್‌ ತಿದ್ದುಪಡಿ ಮಸೂದೆಯು ಮುಸ್ಲಿಂ ಸಮುದಾಯದ ಹಕ್ಕುಗಳಿಗೆ ಧಕ್ಕೆ ತರುವ ‘ಕರಾಳ ಕಾನೂನು’ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಟೀಕಿಸಿದೆ.

‘ಈ ಮಸೂದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಅಲ್ಲದೆ, ಇದರ ವಿರುದ್ಧ ರಾಷ್ಟ್ರದಾದ್ಯಂತ ಬೀದಿಗಿಳಿದು ಹೋರಾಟ ನಡೆಸಲಾಗುವುದು’ ಎಂದು ಮಂಡಳಿ ಬುಧವಾರ ತಿಳಿಸಿದೆ.

ADVERTISEMENT

ಎಐಎಂಪಿಎಲ್‌ಬಿ ಸದಸ್ಯ ಮೊಹಮ್ಮದ್ ಅದೀಬ್, ‘ಇದು ಮುಸ್ಲಿಂ ಸಮುದಾಯದ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನ' ಎಂದು ಪತ್ರಿಕಾಗೋಷ್ಠಿಯಲ್ಲಿ  ಟೀಕಿಸಿದರು. 

‘ಅವರು ನಮ್ಮ ಆಸ್ತಿಯನ್ನು ಕಸಿದುಕೊಳ್ಳಬಹುದೆಂದು ಭಾವಿಸಿದ್ದಾರೆ. ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ಈ ಮಸೂದೆ ಹಿಂಪಡೆಯುವವರೆಗೂ ನಾವು ವಿರಮಿಸುವುದಿಲ್ಲ. ಮಸೂದೆ ಪರಿಶೀಲನೆಗಾಗಿ ರಚಿಸಲಾದ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಸಭೆಯಲ್ಲೂ ಮಸೂದೆಯನ್ನು ವಿರೋಧಿಸಲಾಗಿದೆ. ನಾವು ಯುದ್ಧವನ್ನು ಸೋತಿದ್ದೇವೆಂದು ಭಾವಿಸಬಾರದು. ನಾವು ಈಗಷ್ಟೇ ಪ್ರಾರಂಭಿಸಿದ್ದೇವೆ. ಇದು ದೇಶವನ್ನು ಉಳಿಸುವ ಹೋರಾಟವಾಗಿದೆ. ಏಕೆಂದರೆ ಉದ್ದೇಶಿತ ಮಸೂದೆಯು ಭಾರತದ ಅಡಿಪಾಯಕ್ಕೆ ಅಪಾಯ ಉಂಟುಮಾಡುತ್ತದೆ’ ಎಂದು ಅದೀಬ್‌ ಹೇಳಿದರು. 

‘ಆತ್ಮಸಾಕ್ಷಿಯುಳ್ಳ ನಾಗರಿಕರೆಲ್ಲರೂ ಈ ಕರಾಳ ಮಸೂದೆಯನ್ನು ವಿರೋಧಿಸಬೇಕು. ಈ ಮಸೂದೆ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಸಲು ಎಐಎಂಪಿಎಲ್‌ಬಿ ಕಟಿಬದ್ಧವಾಗಿದೆ‘ ಎಂದರು.

‘ಮಂಡಳಿಯ ಸದಸ್ಯರು ರೈತರ ಆಂದೋಲನದ ಮಾದರಿಯಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿದ್ದಾರೆ. ಅಗತ್ಯವಿದ್ದರೆ, ರಸ್ತೆ ತಡೆ ಮಾಡುತ್ತೇವೆ. ನಾವು ದೇಶವನ್ನು ಉಳಿಸಲು ಬಯಸುತ್ತೇವೆ. ಈ ಕರಾಳ ಕಾನೂನನ್ನು ಕೊನೆಗೊಳಿಸುವುದು ನಮ್ಮ ಗುರಿಯಾಗಿದೆ’ ಎಂದು ಎಐಎಂಪಿಎಲ್‌ಬಿ ವಕ್ತಾರ ಮೊಹಮ್ಮದ್ ಅಲಿ ಮೊಹ್ಸಿನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.