
ಏರ್ ಇಂಡಿಯಾ
(ಚಿತ್ರ ಕೃಪೆ: ಏರ್ ಇಂಡಿಯಾ)
ನವದೆಹಲಿ: ಹೀಥ್ರೂದಿಂದ ಬೆಂಗಳೂರಿಗೆ ಬಂದಿಳಿದ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನದಲ್ಲಿ, ಎಂಜಿನ್‌ಗೆ ಇಂಧನ ಪೂರೈಸುವ ಸ್ವಿಚ್ ವಿಫಲವಾಗಿದ್ದರಿಂದ ಆ ವಿಮಾನದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಕಳೆದ ವರ್ಷ ಜೂನ್ 12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡಿದ್ದ ಸಮಸ್ಯೆಯೇ ಈ ವಿಮಾನದಲ್ಲೂ ಕಾಣಿಸಿಕೊಂಡಿದೆ. ಆ ದುರಂತದಲ್ಲಿ ಸಿಬ್ಬಂದಿ ಹಾಗೂ ಪ್ರಯಾಣಿಕರು ಸೇರಿ 260 ಮಂದಿ ಸಾವಿಗೀಡಾಗಿದ್ದರು.
ಎಐ 132 ವಿಮಾನವು ಸೋಮವಾರ ಬೆಂಗಳೂರಿಗೆ ಬಂದಿಳಿಯಿತು. ಬರುವ ಮಾರ್ಗದಲ್ಲಿ ಇಂಧನ ಪೂರೈಕೆಯನ್ನು ನಿಯಂತ್ರಿಸುವ ಸ್ವಿಚ್ ಎರಡು ಬಾರಿ ವಿಫಲವಾಗಿದೆ. ಸ್ವಿಚ್‌ನಲ್ಲಿ ದೋಷವಿರುವುದನ್ನು ಪೈಲಟ್ ತಿಳಿಸಿದ ನಂತರ ವಿಮಾನವನ್ನು ಕಾರ್ಯಚರಣೆಯಿಂದ ಹಿಂಪಡೆಯಲಾಗಿದೆ ಎಂದು ಏರ್ ಇಂಡಿಯಾ ಸಂಸ್ಥೆಯ ವಕ್ತಾರರು ತಿಳಿಸಿದರು.
ಪೈಲಟ್‌ಗಳ ಕಳವಳಕ್ಕೆ ಆದ್ಯತೆ ನೀಡಿ, ಬಿಡಿಭಾಗಗಳ ತಯಾರಕಾ ಸಂಸ್ಥೆಯನ್ನು ಸಮಸ್ಯೆ ಕುರಿತು ಪ್ರಶ್ನಿಸಲಾಗುವುದು. ಭಾರತೀಯ ವಾಯುಯಾನ ನಿಯಂತ್ರಕ ಸಂಸ್ಥೆಗೆ ಮಾಹಿತಿ ನೀಡಲಾಗಿದೆ ಎಂದು ಅದು ಅವರು ಹೇಳಿದರು.
ಘಟನೆ ಬಳಿಕ, ವಿಮಾನ ತಯಾರಕ ಸಂಸ್ಥೆ ಬೋಯಿಂಗ್ ವಕ್ತಾರರು ಏರ್ ಇಂಡಿಯಾದೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಬೋಯಿಂಗ್ ಹಾಗೂ ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಳೆದ ವರ್ಷ ನಡೆದ ಅಪಘಾತದ ಬಳಿಕ ಏರ್ ಇಂಡಿಯಾ ತನ್ನ ಎಲ್ಲಾ ಬೋಯಿಂಗ್ 787 ವಿಮಾನಗಳ ಇಂಧನ ನಿಯಂತ್ರಕ ಸ್ವಿಚ್‌ಗಳನ್ನು ಪರಿಶೀಲಿಸಿದ್ದು, ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.