ಏರ್ ಇಂಡಿಯಾ ವಿಮಾನ
ನವದೆಹಲಿ: ತಿರುವನಂತಪುರದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಚೆನ್ನೈಗೆ ತಿರುಗಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಏರ್ ಇಂಡಿಯಾ ‘ಏರ್‌ಬಸ್ ಎ320’ ವಿಮಾನವು ಎರಡು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿತು ಎಂದು ಫ್ಲೈಟ್‌ರ್‍ಯಾಡಾರ್24 ಡಾಟ್ ಕಾಮ್ ವರದಿ ಮಾಡಿದೆ.
‘ಆಗಸ್ಟ್ 10ರಂದು ತಿರುವನಂತಪುರದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ–AI2455 ವಿಮಾನದ ಸಿಬ್ಬಂದಿ ಶಂಕಿತ ತಾಂತ್ರಿಕ ದೋಷ ಮತ್ತು ಮಾರ್ಗಮಧ್ಯೆ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮವಾಗಿ ಚೆನ್ನೈಗೆ ಮಾರ್ಗ ಬದಲಾವಣೆ ಮಾಡಿದ್ದಾರೆ’ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
‘ವಿಮಾನವು ಚೆನ್ನೈನಲ್ಲಿ ಸುರಕ್ಷಿತವಾಗಿ ಇಳಿದಿದ್ದು, ತಪಾಸಣೆ ನಡೆಸಲಾಗುತ್ತಿದೆ’ ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ.
ಪ್ರಯಾಣಿಕರನ್ನು ಆದಷ್ಟು ಬೇಗ ಅವರ ಗಮ್ಯಸ್ಥಾನಗಳಿಗೆ ತಲುಪಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಜತೆಗೆ, ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ. ಪ್ರಯಾಣಿಕರ ಸಂಖ್ಯೆಯ ಬಗ್ಗೆ ವಿವರಗಳು ಲಭ್ಯವಿಲ್ಲ.
ಮೂಲಗಳ ಪ್ರಕಾರ, ವಿಮಾನವು ರಾತ್ರಿ 8 ಗಂಟೆಗೆ ತಿರುವನಂತಪುರದಿಂದ ಹೊರಟು ರಾತ್ರಿ 10.35ರ ಸುಮಾರಿಗೆ ಚೆನ್ನೈಗೆ ತಲುಪಬೇಕಿತ್ತು.
ಇದೇ ವಿಮಾನದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ದೆಹಲಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ವಿಮಾನಗಳ ಸುರಕ್ಷತೆ ವಿಚಾರವಾಗಿ ಜುಲೈನಲ್ಲಿ ಏರ್ ಇಂಡಿಯಾ ಸಂಸ್ಥೆಯು 51 ಲೋಪಗಳನ್ನು ಎಸಗಿರುವುದು ಕಂಡುಬಂದಿದೆ ಎಂದು ಈಚೆಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.