ಸುಪ್ರೀಂ ಕೋರ್ಟ್ ಮತ್ತು ವಿಮಾನ ದುರಂತ
ನವದೆಹಲಿ: 260 ಮಂದಿಯ ಸಾವಿಗೆ ಕಾರಣವಾದ ಅಹಮದಾಬಾದ್ ವಿಮಾನ ದುರಂತ ಪ್ರಕರಣದ ಬಗ್ಗೆ ತನ್ನ ಮೇಲ್ವಿಚಾರಣೆ ಮತ್ತು ನಿಯಂತ್ರಣದಲ್ಲಿ ಸ್ವತಂತ್ರ ತನಿಖೆ ನಡೆಸಬೇಕು ಎಂದು ಸಲ್ಲಿಸಲಾದ ಅರ್ಜಿಯ ಸಂಬಂಧ, ಕೇಂದ್ರ ಸರ್ಕಾರ ಹಾಗೂ ಇತರರಿಗೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.
ಕ್ಯಾಪ್ಟನ್ ಅಮಿತ್ ಸಿಂಗ್ ಸ್ಥಾಪಿತ ವಿಮಾನಯಾನ ಸುರಕ್ಷತಾ ಎನ್‌ಜಿಒ ‘ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್’ ವಕೀಲ ಪ್ರಣವ್ ಸಚ್‌ದೇವ ಮೂಲಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಎನ್. ಕೋಟಿಶ್ವರ್ ಸಿಂಗ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಾಜರಾದ ವಕೀಲ ಪ್ರಶಾಂತ್ ಭೂಷಣ್, ಘಟನೆಗೆ ಪೈಲಟ್‌ಗಳನ್ನು ಹೊಣೆ ಮಾಡುವ ವರದಿಗಳನ್ನು ಉಲ್ಲೇಖಿಸಿದರು. ‘ನ್ಯಾಯಯುತ ಹಾಗೂ ನಿಷ‍್ಪಕ್ಷವಾತ ತನಿಖೆಗೆ ಆಗ್ರಹಿಸುವುದು ಸರಿಯೆ, ಆದರೆ ಆಯ್ದ ಮಾಹಿತಿಯನ್ನು ಮಾತ್ರ ಸೋರಿಕೆ ಮಾಡುವುದು ದುರ್ದೈವ’ ಎಂದು ಕೋರ್ಟ್ ಹೇಳಿತು.
ವಿಮಾನದ ದತ್ತಾಂಶ ದಾಖಲೆಗಳನ್ನು ಬಹಿರಂಗಪಡಿಸಬೇಕು ಎನ್ನುವ ಬೇಡಿಕೆಯ ಔಚಿತ್ಯವನ್ನು ಕೋರ್ಟ್ ಪ್ರಶ್ನಿಸಿತು. ಸದ್ಯ ನಡೆಯುತ್ತಿರುವ ತನಿಖೆ ತಾರ್ಕಿತ ಅಂತ್ಯಕ್ಕೆ ಬರುವವರೆಗೆ ಗೋಪ್ಯತೆಯನ್ನು ಕಾಪಾಡಬೇಕು ಎನ್ನುವ ವಾದವನ್ನು ಕೋರ್ಟ್ ಸಮರ್ಥಿಸಿಕೊಂಡಿತು.
‘ಇಂಥ ದುರ್ಘಟನೆಗಳು ಸಂಭವಿಸಿದಾಗ, ಬೋಯಿಂಗ್ ಅಥವಾ ಏರ್‌ಬಸ್ ಮೇಲೆ ತಪ್ಪುಗಳನ್ನು ಹೊರಿಸಲಾಗುವುದಿಲ್ಲ, ಇಡೀ ವಿಮಾನ ಸಂಸ್ಥೆಯೇ ವಿಫಲಗೊಳ್ಳುತ್ತದೆ’ ಎಂದು ಪೀಠ ಅಭಿಪ್ರಾಯಪಟ್ಟಿತು.
ತನಿಖೆ ಸಮಿತಿಯಲ್ಲಿ ಡಿಜಿಸಿಎ ಸದಸ್ಯರು ಇರುವುದರಿಂದ ಹಿತಾಸಕ್ತಿ ಸಂಘರ್ಷದ ಬಗ್ಗೆಯೂ ಭೂಷಣ್ ಕೋರ್ಟ್ ಗಮನ ಸೆಳೆದರು.
ದುರಂತಕ್ಕೀಡಾದ ಏರ್ ಇಂಡಿಯಾ ಬೋಯಿಂಗ್ –787–8 ಡ್ರೀಮ್‌ಲೈನರ್ ವಿಮಾನದ ದತ್ತಾಂಶವನ್ನು ಬಹಿರಂಗಗೊಳಿಸಲು ನಿರ್ದೇಶಿಸಬೇಕು ಎಂದು ಕೋರಿದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿತು.
‘ಭೀಕರ ಅಪಾಘಾತದಲ್ಲಿ ನೂರಾರು ಜೀವಗಳನ್ನು ಕಳೆದುಕೊಂಡಾಗ, ಇಡೀ ದೇಶ ಮೃತರಿಗಾಗಿ ವ್ಯಥೆ ಪಡುವುದು ಮಾತ್ರವಲ್ಲದೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತೆನೆಯಾಗಂದತೆ ತನಿಖಾ ಪ್ರಕ್ರಿಯೆಯು ಸತ್ಯ, ಹೊಣೆಗಾರಿಕೆಯ ಮೂಲವಾಗಿರಬೇಕು ಎಂದು ಬಯಸುತ್ತದೆ. ಹೀಗಾಗಿ ಇದರ ಹಿತ ಸಂತ್ರಸ್ತರ ಕುಟುಂಬಕ್ಕೆ ಮಾತ್ರವಲ್ಲದೆ, ಪ್ರತಿ ನಾಗರಿಕರ ಮೇಲೂ ಅನ್ವಯ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.