ADVERTISEMENT

ಚೆನ್ನೈ-ಲಂಡನ್ ನಡುವೆ ತಡೆರಹಿತ ವಿಮಾನಯಾನಕ್ಕೆ ಏರ್‌ ಇಂಡಿಯಾ ಯೋಜನೆ

ಪಿಟಿಐ
Published 29 ನವೆಂಬರ್ 2020, 13:10 IST
Last Updated 29 ನವೆಂಬರ್ 2020, 13:10 IST
ಏರ್ ಇಂಡಿಯಾ ಸಾಂದರ್ಭಿಕ ಚಿತ್ರ
ಏರ್ ಇಂಡಿಯಾ ಸಾಂದರ್ಭಿಕ ಚಿತ್ರ   

ನವದೆಹಲಿ: ಮುಂದಿನ ವರ್ಷ ಜನವರಿಯಿಂದ ಚೆನ್ನೈ-ಲಂಡನ್ ಮಾರ್ಗದಲ್ಲಿ ತಡೆರಹಿತ ವಿಮಾನಗಳ ಕಾರ್ಯಾಚರಣೆ ನಡೆಸಲು ಏರ್ ಇಂಡಿಯಾ ಯೋಜಿಸುತ್ತಿದ್ದು, ತಮಿಳುನಾಡಿನ ರಾಜಧಾನಿ ಬ್ರಿಟಿಷ್ ರಾಜಧಾನಿಯೊಂದಿಗೆ ಸಂಪರ್ಕ ಹೊಂದಿದ ಒಂಭತ್ತನೇ ನಗರವಾಗಲಿದೆ.

ಏರ್‌ ಇಂಡಿಯಾ ಸದ್ಯ ದೆಹಲಿಯಿಂದ ಲಂಡನ್‌ಗೆ ತಡೆರಹಿತ ವಿಮಾನಗಳನ್ನು (ವಾರಕ್ಕೆ ಏಳು ವಿಮಾನಗಳು), ಮುಂಬೈ (ವಾರಕ್ಕೆ ನಾಲ್ಕು ವಿಮಾನಗಳು), ಕೊಚ್ಚಿ (ವಾರಕ್ಕೆ ಮೂರು ವಿಮಾನಗಳು), ಅಹಮದಾಬಾದ್ (ವಾರಕ್ಕೆ ಎರಡು ವಿಮಾನಗಳು), ಬೆಂಗಳೂರು (ವಾರಕ್ಕೆ ಎರಡು ವಿಮಾನಗಳು), ಗೋವಾ (ವಾರಕ್ಕೆ ಎರಡು ವಿಮಾನಗಳು), ಕೋಲ್ಕತ್ತ (ವಾರಕ್ಕೆ ಒಂದು ವಿಮಾನ) ಮತ್ತು ಅಮೃತಸರದಿಂದ (ವಾರಕ್ಕೆ ಒಂದು ವಿಮಾನ) ಹಾರಾಟ ನಡೆಸುತ್ತಿವೆ ಎಂದು ವಿಮಾನಯಾನ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.

ಕೋವಿಡ್‌–19 ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಯಾದ ಲಾಕ್‌ಡೌನ್‌ ನಂತರ ಅದರ ಲಂಡನ್ ವಿಮಾನಗಳಲ್ಲಿ ಸೀಟು ಭರ್ತಿ ಕುರಿತು ಕೇಳಿದ ಉತ್ತರಿಸಿದ ವಕ್ತಾರರು 'ಪ್ರಯಾಣಿಕರ ಸಂಖ್ಯೆಯು ಉತ್ತಮವಾಗಿದೆ' ಎಂದು ಹೇಳಿದರು.

ADVERTISEMENT

ದೆಹಲಿ, ಕೊಚ್ಚಿ, ಗೋವಾ ಮತ್ತು ಅಹಮದಾಬಾದ್‌ನಂತಹ ಕೆಲವು ನಿಲ್ದಾಣಗಳಲ್ಲಿ (ಲಂಡನ್ ವಿಮಾನಗಳಿಗೆ) ಭಾರಿ ಬೇಡಿಕೆ ಕಂಡುಬಂದಿದೆ. '2021ರ ಜನವರಿಯಿಂದ ಚೆನ್ನೈ ಮತ್ತು ಲಂಡನ್ ನಡುವೆ ನೇರ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಯೋಜನೆಯು ನಮ್ಮಲ್ಲಿದೆ' ಎಂದು ವಕ್ತಾರರು ತಿಳಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ 23ರಿಂದ ಭಾರತದಲ್ಲಿ ಪ್ರಯಾಣಿಕರ ಅಂತರರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿತ್ತು. ಮೇ ತಿಂಗಳಿನಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮತ್ತು ಜುಲೈನಿಂದ ದ್ವಿಪಕ್ಷೀಯ ಒಪ್ಪಂದಗಳ ಅಡಿಯಲ್ಲಿ ವಿಶೇಷ ಅಂತರರಾಷ್ಟ್ರೀಯ ವಿಮಾನಯಾನ ಸೇವೆಗಳ ಕಾರ್ಯಾಚರಣೆ ನಡೆಸಲು ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ವಿಮಾನಗಳು ದ್ವಿಪಕ್ಷೀಯ ಒಪ್ಪಂದದಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.