ADVERTISEMENT

AirIndia ವಿಮಾನ ಪತನ: ಸಂತ್ರಸ್ತ ಕುಟುಂಬಗಳು UK, US ನ್ಯಾಯಾಲಯಗಳ ಮೊರೆ ಸಾಧ್ಯತೆ

ಏಜೆನ್ಸೀಸ್
Published 1 ಜುಲೈ 2025, 15:19 IST
Last Updated 1 ಜುಲೈ 2025, 15:19 IST
   

ನವದೆಹಲಿ: ಗುಜರಾತ್‌ನ ಅಹಮದಾಬಾದ್‌ನಲ್ಲಿ ಜೂನ್ 12ರಂದು ಪತನಗೊಂಡ ಏರ್ ಇಂಡಿಯಾಗೆ ಸೇರಿದ ಬೋಯಿಂಗ್ 787–8 ಡ್ರೀಮ್‌ಲೈನರ್‌ ವಿಮಾನದಲ್ಲಿ ಮೃತಪಟ್ಟವರ ಕುಟುಂಬದವರು ವಿಮಾನ ಕಂಪನಿ ವಿರುದ್ಧ ಅಮೆರಿಕ ಹಾಗೂ ಬ್ರಿಟನ್ ನ್ಯಾಯಾಲಯಗಳಲ್ಲಿ ದಾವೆ ಹೂಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಜೂನ್‌ 12ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವು ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಘಟನೆಯಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಸೇರಿದಂತೆ ವಿಮಾನದಲ್ಲಿದ್ದ 242 ಮಂದಿಯ ಪೈಕಿ 241 ಮಂದಿ ಮೃತಪಟ್ಟಿದ್ದರು. ವಿಮಾನ ಡಿಕ್ಕಿ ಹೊಡೆದ ಸ್ಥಳದಲ್ಲಿದ್ದ ಎಂಬಿಬಿಎಸ್‌ ವಿದ್ಯಾರ್ಥಿಗಳೂ ಸೇರಿ 34 ಮಂದಿ ಸಾವಿಗೀಡಾಗಿದ್ದರು.

ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್‌ ಕುಮಾರ್ ರಮೇಶ್‌ ಅವರು ಈಚೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

ADVERTISEMENT

‘ವಿಮಾನದ ನಿರ್ವಹಣೆ ಉತ್ತಮವಾಗಿತ್ತು. ಪೈಲೆಟ್‌ಗಳೂ ನುರಿತವರು ಹಾಗೂ ಅನುಭವಿಗಳಾಗಿದ್ದರು’ ಎಂದು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಹೇಳಿದೆ.

ಅಂತರರಾಷ್ಟ್ರೀಯ ಕಾನೂನಿನ್ವಯ ಈ ವಿಷಯವನ್ನು ವಿವಿಧ ರಾಷ್ಟ್ರಗಳ ನ್ಯಾಯಾಲಯದಲ್ಲಿ ಪ್ರಶ್ನಿಸಲು ಇರುವ ಕಾನೂನಿನ ಹಕ್ಕುಗಳ ಕುರಿತು ಸಂತ್ರಸ್ತ ಕುಟುಂಬಗಳ ನಡುವೆ ಚರ್ಚೆಗಳು ನಡೆಯುತ್ತಿವೆ. ಬ್ರಿಟನ್‌ ಮೂಲದ ಜೇಮ್ಸ್‌ ಹೀಲಿ-ಪ್ರಾಟ್‌ ಹಾಗೂ ಅವೆನ್‌ ಹೆನ್ನಾ ಅವರ ಕೀಸ್ಟೋನ್ ಲಾ, ಅಮೆರಿಕದ ವಿಮಾನಯಾನ ನುರಿತ ವಿಸ್ನೆರ್‌ ಲಾ ಫರ್ಮ್‌ ಜತೆಗೂಡಿ ಕಾನೂನು ಹೋರಾಟ ನಡೆಸಲು ಮುಂದಾಗಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಈ ಅಪಘಾತಕ್ಕೆ ಸಂಬಂಧಿಸಿದಂತೆ ವಿಮಾನ ತಯಾರಿಸಿದ ಅಮೆರಿಕ ಮೂಲದ ಬೋಯಿಂಗ್‌ ಕಂಪನಿ ಹಾಗೂ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ವಿರುದ್ಧ ಲಂಡನ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಜೇಮ್ಸ್ ಹೀಲಿ–ಪ್ರಾಟ್‌ ಹಾಗೂ ಕೀಸ್ಟೋನ್ ಲಾ ಜತೆಗೂಡಿವೆ.

ದುರಂತದಲ್ಲಿ ಮೃತಪಟ್ಟವರ ಕುಟುಂಬವರಿಗೆ ಮಧ್ಯಂತರ ಪರಿಹಾರವಾಗಿ ತಲಾ ₹25 ಲಕ್ಷ ನೀಡುವ ಭರವಸೆಯನ್ನು ಏರ್‌ ಇಂಡಿಯಾ ನೀಡಿತ್ತು. ಇದರೊಂದಿಗೆ ₹1 ಕೋಟಿ ಪರಿಹಾರ ನೀಡುವುದಾಗಿಯೂ ಏರ್‌ ಇಂಡಿಯಾ ಮಾಲೀಕತ್ವದ ಟಾಟಾ ಸನ್ಸ್‌ ಹೇಳಿತ್ತು.

ಏರ್‌ ಇಂಡಿಯಾ ಡ್ರೀಮ್‌ಲೈನರ್‌ ಪತನಕ್ಕೆ ಸಂಬಂಧಿಸಿದಂತೆ ವಿಸ್ತೃತವಾದ ತನಿಖೆ ಪ್ರಗತಿಯಲ್ಲಿದೆ. ಅದರ ವರದಿ ಕೈಸೇರುತ್ತಿದ್ಧಂತೆ ಈ ತಂಡವು ಸಂತ್ರಸ್ತ ಕುಟುಂಬಗಳ ಪರವಾಗಿ ಧಾವೆ ಹೂಡಲು ಸಜ್ಜಾಗಿದೆ. 

ದಿ ಮಾಂಟ್‌ರಿಯಲ್‌ ಕನ್ವೆನ್ಶನ್‌ 1999 ಪ್ರಕಾರ ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡರೆ ಅಥವಾ ಪ್ರಯಾಣಿಕ ಗಾಯಗೊಂಡರೆ, ವಿಮಾನ ವಿಳಂಬವಾದರೆ, ಹಾನಿಯಾದರೆ ಅಥವಾ ಕಾರ್ಗೊ ವಿಮಾನದಲ್ಲಿ ಸರಕುಗಳಿಗೆ ಹಾನಿಯಾದರೆ ಸಂಬಂಧಿಸಿದ ವಿಮಾನಯಾನ ಸಂಸ್ಥೆಯೇ ಪರಿಹಾರ ಕಟ್ಟಿಕೊಡಬೇಕು ಎಂಬ ಕಾನೂನಿದೆ. ಈ ನಿಟ್ಟಿನಲ್ಲೂ ಕಾನೂನು ಹೋರಾಟಕ್ಕೆ ಮುಂದಾಗಿರುವ ಕಂಪನಿಗಳು, ಅಂತರರಾಷ್ಟ್ರೀಯ ಕಾನೂನು ಅಧ್ಯಯನದಲ್ಲಿ ತೊಡಗಿದೆ ಎಂದು ವರದಿಯಾಗಿದೆ.

ದುರಂತಕ್ಕೀಡಾದ ಏರ್‌ ಇಂಡಿಯಾ AI171 ವಿಮಾನದಲ್ಲಿ ಭಾರತದ 169 ಪ್ರಯಾಣಿಕರು, 53 ಬ್ರಿಟಿಷ್‌, ಏಳು ಪೋರ್ಚುಗೀಸ್‌ ಮತ್ತು ಕೆನಡಾದ ಪ್ರಯಾಣಿಕರು ಇದ್ದರು. 12 ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.