ADVERTISEMENT

ಮುಂಬೈ ಪ್ರವಾಹ: ಒಂಬತ್ತು ಗರ್ಭಿಣಿಯರು ಸೇರಿದಂತೆ 1,050 ರೈಲು ಪ್ರಯಾಣಿಕರ ರಕ್ಷಣೆ

ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ರೈಲಿನಲ್ಲಿದ್ದ 1 ತಿಂಗಳ ಮಗುವಿನ ರಕ್ಷಣೆ

ಪಿಟಿಐ
Published 27 ಜುಲೈ 2019, 19:56 IST
Last Updated 27 ಜುಲೈ 2019, 19:56 IST
   

ಮುಂಬೈ: ಶುಕ್ರವಾರ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಮುಂಬೈ ನಗರಿ ತತ್ತರಿಸಿದೆ. ಮುಂಬೈನಿಂದ ಕೊಲ್ಹಾಪುರಕ್ಕೆ ಹೊರಟಿದ್ದ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ರೈಲು, ಶುಕ್ರವಾರ ರಾತ್ರಿಯಿಂದ ಠಾಣೆಯ ಬದ್ಲಾಪುರದ ಬಳಿ ಪ್ರವಾಹದ ನೀರಿನಲ್ಲಿ ಸಿಲುಕಿತ್ತು. ರೈಲಿನಲ್ಲಿದ್ದ 1,050 ಪ್ರಯಾಣಿಕರನ್ನು ಶನಿವಾರ ಮಧ್ಯಾಹ್ನದ ವೇಳೆಗೆ ರಕ್ಷಿಸಲಾಯಿತು.

ಶುಕ್ರವಾರ ರಾತ್ರಿಯೇ ರೈಲು ಮುಂಬೈನಿಂದ ಹೊರಟಿತ್ತು. ಠಾಣೆ ಜಿಲ್ಲೆಯ ವಂಗಾನಿ ಪಟ್ಟಣದ ಹೊರವಲಯದಲ್ಲಿ ಹಳಿಗಳು ಜಲಾವೃತವಾಗಿದ್ದವು. ರೈಲು ಆ ಸ್ಥಳದಿಂದ ಮುಂದೆ ಸಾಗುವುದು ಅಸಾಧ್ಯವಾಗಿತ್ತು. ಹೀಗಾಗಿ ರೈಲು ಅಲ್ಲೇ ನಿಂತಿತ್ತು ಎಂದು ರೈಲ್ವೆ ಮೂಲಗಳು ಹೇಳಿವೆ.

ತಡರಾತ್ರಿಯಲ್ಲಿ ರೈಲಿನ ಸಂಚಾರ ಸ್ಥಗಿತವಾಗಿದ್ದರೂ, ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗುವಾಗ ಬೆಳಗಿನ ಜಾವವಾಗಿತ್ತು. ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ (ಎನ್‌ಡಿಆರ್‌ಎಫ್‌) ಮಾಹಿತಿ ರವಾನೆಯಾಗಿ, ಅವರು ರಕ್ಷಣೆಗೆ ಧಾವಿಸುವಾಗ ಶನಿವಾರ ಬೆಳಿಗ್ಗೆ 9.15 ಕಳೆದಿತ್ತು ಎಂದು ಮಾಹಿತಿ ನೀಡಿವೆ.

ADVERTISEMENT

ರೈಲು ಮಾರ್ಗದಿಂದ ಎರಡೂ ಬದಿಯಲ್ಲಿ ಸುಮಾರು 2 ಕಿ.ಮೀ.ನಷ್ಟು ದೂರದವರೆಗೂ ಪ್ರವಾಹದ ನೀರು ನಿಂತಿತ್ತು. ಹೀಗಾಗಿ ಎನ್‌ಡಿಆರ್‌ಎಫ್‌ ಒಂದರಿಂದಲೇ ರಕ್ಷಣಾ ಕಾರ್ಯ ಸಾಧ್ಯವಿರಲಿಲ್ಲ. ಆದ್ದರಿಂದ ನೌಕಾಪಡೆ, ವಾಯುಪಡೆ ಮತ್ತು ಭೂಸೇನೆಯ ನೆರವನ್ನು ಎನ್‌ಡಿಆರ್‌ಎಫ್‌ ಕೋರಿತು. ಈ ಎಲ್ಲಾ ಪಡೆಗಳ ಸಂಯೋಜಿತ ಕಾರ್ಯಾಚರಣೆಯಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯತು ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ಹೇಳಿವೆ.

ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ ಎಫ್‌ನ ದೋಣಿಗಳು, ನೌಕಾಪಡೆಯ ದೋಣಿಗಳು ಮತ್ತು ಮುಳುಗುತಜ್ಞರು, ವಾಯುಪಡೆಯ ಹೆಲಿಕಾಪ್ಟರ್‌ಗಳು ಮತ್ತು ಭೂಸೇನೆಯ ವಾಹನಗಳನ್ನು ಬಳಸಿಕೊಳ್ಳಲಾಗಿತ್ತು.

ರಕ್ಷಣೆಗೆ ನೆರವಾದ ಟ್ವೀಟ್‌ಗಳು

ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ರೈಲು ಪ್ರವಾಹದ ನೀರಿನಲ್ಲಿ ಸಿಲುಕಿರುವ ಮಾಹಿತಿ ಹೊರಜಗತ್ತಿಗೆ ತಿಳಿದಿದ್ದು ಆ ರೈಲಿನ ಪ್ರಯಾಣಿಕರಿಂದಲೇ. ಶುಕ್ರವಾರ ತಡರಾತ್ರಿಯಲ್ಲಿ #mumbairains ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಹಲವು ವಿಡಿಯೊಗಳು ಪ್ರಕಟವಾಗತೊಡಗಿದವು. ಎಲ್ಲದರಲ್ಲೂ, ‘ನಮ್ಮ ರೈಲು ಪ್ರವಾಹದಲ್ಲಿ ಸಿಲುಕಿದೆ. ನಮ್ಮನ್ನು ಕಾಪಾಡಿ’ ಎಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದರು.

ಈ ವಿಡಿಯೊಗಳು ವೈರಲ್ ಆದವು. ಅದೇ ವೇಳೆಗೆ ಬದಲಾಪುರ ರೈಲು ನಿಲ್ದಾಣದಿಂದ ರೈಲ್ವೆ ಪೊಲೀಸರು, ರೈಲು ಸಿಲುಕಿದ್ದ ಸ್ಥಳವನ್ನು ತಲುಪಿದ್ದರು. ಆದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದುದ್ದರಿಂದ ಮತ್ತು ಪ್ರವಾಹದ ಮಟ್ಟ ಏರಿದ್ದರಿಂದ ರಕ್ಷಣಾ ಕಾರ್ಯ ಸಾಧ್ಯವಾಗಲಿಲ್ಲ. ಈ ಮಾಹಿತಿ ಜಿಲ್ಲಾಡಳಿತಕ್ಕೆ ರವಾನೆಯಾಗುವಷ್ಟರಲ್ಲಿ ಬೆಳಿಗ್ಗೆ 5.30 ಕಳೆದಿತ್ತು.

ಆ ವೇಳೆಗೆ 2,000ಕ್ಕೂ ಹೆಚ್ಚು ಪ್ರಯಾಣಿಕರು ರೈಲಿನಲ್ಲಿ ಸಿಲುಕಿದ್ದಾರೆ ಎಂದು ಸುದ್ದಿವಾಹಿನಿಗಳು ವರದಿ ಪ್ರಸಾರ ಮಾಡಿದವು. ಅಷ್ಟರಲ್ಲೇ ರಕ್ಷಣಾ ಕಾರ್ಯಾಚರಣೆಗೆ ಧಾವಿಸುವಂತೆ ಎನ್‌ಡಿಆರ್‌ಎಫ್‌ಗೆ ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿಕೊಂಡಿತು.

ಎನ್‌ಡಿಆರ್‌ಎಫ್ ತಂಡಗಳು ಸ್ಥಳ ತಲುಪುವುದು ತಡವಾಗಿತ್ತು. ಈ ನಡುವೆ ಹಲವು ಪ್ರಯಾಣಿಕರು ರೈಲಿನಿಂದ ಇಳಿಯಲು ಯತ್ನಿಸಿದ್ದರು. ಆದರೆ ರೈಲ್ವೆ ಪೊಲೀಸರು ತಡೆದರು. ರೈಲಿನ ಪ್ರತೀ ಬೋಗಿಗೂ ತೆರಳಿ, ‘ರಕ್ಷಣಾ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ರೈಲಿಗೆ ಹೆಚ್ಚು ಅಪಾಯವೇನೂ ಇಲ್ಲ. ರೈಲಿನಲ್ಲೇ ಇದ್ದರೆ ನೀವು ಸುರಕ್ಷಿತವಾಗಿರುತ್ತೀರಿ’ ಎಂದು ಧೈರ್ಯ ತುಂಬಿದರು.

ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ ಪ್ರಯಾಣಿಕರಿಗೆ ಉಪಾಹಾರ ಒದಗಿಸಲಾಯಿತು. ನಂತರ ಅವರನ್ನು ವಾಹನಗಳ ಮೂಲಕ ಕಲ್ಯಾಣ್ ರೈಲು ನಿಲ್ದಾಣಕ್ಕೆ ತಲುಪಿಸಲಾಯಿತು.

ಎನ್‌ಡಿಆರ್‌ಎಫ್‌ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ

ಹೊಳೆಯಾದ ರಸ್ತೆಗಳು

ಶುಕ್ರವಾರ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಮುಂಬೈನ ರಸ್ತೆಗಳು ಜಲಾವೃತವಾಗಿವೆ. ಸಾವಿರಾರು ಜನರು ಮನೆಗೆ ತೆರಳಲಾಗದೇ ರಸ್ತೆಗಳಲ್ಲಿ ತಮ್ಮ ವಾಹನಗಳಲ್ಲೇ ರಾತ್ರಿ ಕಳೆದಿದ್ದಾರೆ. ನಗರದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮುಂಬೈ ನಗರ ರೈಲು ಸಂಚಾರ ವ್ಯತ್ಯಯಗೊಂಡಿದೆ. ಮುಂಬೈ–ಗೋವಾ ರಾಷ್ಟ್ರೀಯ ಹೆದ್ದಾರಿಯು ಜಲಾವೃತವಾಗಿರುವುದರಿಂದ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. 11 ವಿಮಾನಗಳ ಸಂಚಾರ ರದ್ದಾಗಿದೆ. ನಿಲ್ದಾಣದಲ್ಲಿ ನಿಂತಿದ್ದ ‘ಏರ್‌ ವಿಸ್ತಾರ’ ಸಂಸ್ಥೆಯ ವಿಮಾನವೊಂದಕ್ಕೆ, ನಿಲ್ದಾಣ ನಿರ್ವಹಣಾ ವಾಹನವು ಡಿಕ್ಕಿ ಹೊಡೆದು ಹಾನಿಯಾಗಿದೆ.

ಅಸ್ಸಾಂ, ಬಿಹಾರ ತತ್ತರ; 9 ಸಾವು

ಅಸ್ಸಾಂ, ಬಿಹಾರದಲ್ಲಿ ಶನಿವಾರವೂ ಪ್ರವಾಹದ ಸ್ಥಿತಿ ಮುಂದುವರಿದಿದೆ. ಎರಡೂ ರಾಜ್ಯಗಳಲ್ಲಿ ಶನಿವಾರ ಮಳೆ ಸಂಬಂಧಿ ಅವಘಡಗಳಿಗೆ 9 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 207ಕ್ಕೆ ಏರಿಕೆಯಾಗಿದೆ.

ಅಸ್ಸಾಂನಲ್ಲಿ ಈವರೆಗೆ 80 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ 17 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಇದೆ. 27.15 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ.

ಬಿಹಾರದಲ್ಲಿ ಈವರೆಗೆ ಮಳೆಗೆ ಬಲಿಯಾದವರ ಸಂಖ್ಯೆ 127. ರಾಜ್ಯದ 13 ಜಿಲ್ಲೆಗಳ 82.84 ಲಕ್ಷ ಜನರು ಪ್ರವಾಹದಿಂದ ನಿರಾಶ್ರಿತರಾಗಿದ್ದಾರೆ.

ದೇಶದ ಬೇರೆ ಬೇರೆ ರಾಜ್ಯ ಸರ್ಕಾರಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು, ಬಿಹಾರ ಮತ್ತು ಅಸ್ಸಾಂಗೆ ರಕ್ಷಣಾ ಮತ್ತು ಪರಿಹಾರ ಸಾಮಗ್ರಿಗಳನ್ನು ಒದಗಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.