ADVERTISEMENT

ರಾಹುಲ್, ಪ್ರಿಯಾಂಕಾ ಅನನುಭವಿಗಳು: ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್

ಪಿಟಿಐ
Published 22 ಸೆಪ್ಟೆಂಬರ್ 2021, 18:53 IST
Last Updated 22 ಸೆಪ್ಟೆಂಬರ್ 2021, 18:53 IST
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಅಮರಿಂದರ್ ಸಿಂಗ್ (ಪಿಟಿಐ ಸಂಗ್ರಹ ಚಿತ್ರ)
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಅಮರಿಂದರ್ ಸಿಂಗ್ (ಪಿಟಿಐ ಸಂಗ್ರಹ ಚಿತ್ರ)   

ಚಂಡೀಗಡ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಅನನುಭವಿಗಳು ಎಂದು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.

2022ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ಅವರನ್ನು ಸೋಲಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

ಪಕ್ಷದ ಆಂತರಿಕ ಭಿನ್ನಮತದಿಂದಾಗಿ ಅಮರಿಂದರ್ ಅವರು ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಚರಣ್‌ಜಿತ್‌ ಸಿಂಗ್ ಚನ್ನಿ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ADVERTISEMENT

ಸರಣಿ ಸಂದರ್ಶನಗಳಲ್ಲಿ ಮಾತನಾಡಿದ ಅಮರಿಂದರ್ ಸಿಂಗ್, ‘ಪ್ರಿಯಾಂಕಾ ಮತ್ತು ರಾಹುಲ್ ನನ್ನ ಮಕ್ಕಳಿದ್ದಂತೆ. ಇದು ಈ ರೀತಿ (ಪಂಜಾಬ್‌ ರಾಜಕೀಯದ ವಿದ್ಯಮಾನಗಳನ್ನು ಉಲ್ಲೇಖಿಸಿ) ಕೊನೆಗೊಳ್ಳಬಾರದಿತ್ತು. ನನಗೆ ನೋವಾಗಿದೆ’ ಎಂದು ಹೇಳಿದ್ದಾರೆ.

‘ನಾನು ಶಾಸಕರನ್ನು ಗೋವಾ ಅಥವಾ ಬೇರೆಡೆಗೆ ವಿಮಾನದಲ್ಲಿ ಕರೆದುಕೊಂಡು ಹೋಗುತ್ತಿರಲಿಲ್ಲ. ಅದು ನಾನು ಕಾರ್ಯನಿರ್ವಹಿಸುವ ರೀತಿಯಲ್ಲ. ನಾನು ಗಿಮಿಕ್‌ಗಳನ್ನು ಮಾಡುವುದಿಲ್ಲ. ಇದು ಗಾಂಧಿ ಕುಟುಂಬದವರಿಗೆ ತಿಳಿದಿದೆ’ ಎಂದು ಅವರು ಹೇಳಿದ್ದಾರೆ.

‘ರಾಹುಲ್ ಮತ್ತು ಪ್ರಿಯಾಂಕಾ ಅನನುಭವಿಗಳು. ಅವರ ಸಲಹೆಗಾರರು ಅವರನ್ನು ದಾರಿ ತಪ್ಪಿಸುತ್ತಿರುವುದು ಸ್ಪಷ್ಟ ಎಂದು ಸಿಂಗ್ ಪ್ರತಿಪಾದಿಸಿದ್ದಾರೆ.

ಸಿಧು ಅವರು ಪಂಜಾಬ್‌ ಮುಖ್ಯಮಂತ್ರಿ ಸ್ಥಾನಕ್ಕೆ ಏರದಂತೆ ತಡೆಯಲು ಶತಾಯಗತಾಯ ಹೋರಾಡಲಿದ್ದೇನೆ. ಅಂತಹ ಅಪಾಯಕಾರಿ ವ್ಯಕ್ತಿಯಿಂದ ದೇಶವನ್ನು ರಕ್ಷಿಸಲು ಯಾವುದೇ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ.

ಪಂಜಾಬ್‌ನಲ್ಲಿ ಕಾಂಗ್ರೆಸ್ಸಿಗೆ ಮತ್ತೊಂದು ಭರ್ಜರಿ ಗೆಲುವು ತಂದುಕೊಟ್ಟು ನಂತರ ಅಧಿಕಾರ ಬಿಟ್ಟುಕೊಡಲು ಮತ್ತು ಬೇರೆಯವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಲು ಸಿದ್ಧ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಿಂಗ್ ಹೇಳಿದ್ದರು.

ಚರ್ಚಿಸಿ ಮುಂದಿನ ನಿರ್ಧಾರ: ‘ನಾನು ಮುಖ್ಯಮಂತ್ರಿ ಹುದ್ದೆಯನ್ನು ಮತ್ತೊಬ್ಬರಿಗೆ ಬಿಟ್ಟು ಕೊಡುವುದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದೆ. ಆದರೆ, ಹಾಗೆ ಆಗಲಿಲ್ಲ. ರಹಸ್ಯವಾಗಿ ಕಾಂಗ್ರೆಸ್‌ ಶಾಸಕರ ಸಭೆ ಕರೆಯಲಾಯಿತು. ನನಗೆ ಅವಮಾನ ಮಾಡಲಾಯಿತು. ನನ್ನ ರಾಜಕೀಯ ಆಯ್ಕೆಯನ್ನು ಮುಕ್ತವಾಗಿರಿಸಿಕೊಂಡಿದ್ದೇನೆ. ನನ್ನ ಮುಂದಿನ ಭವಿಷ್ಯವನ್ನು ನಿರ್ಧರಿಸುವ ಮುನ್ನ ಸ್ನೇಹಿತರೊಂದಿಗೆ ಮಾತನಾಡುವೆ’ ಎಂದೂ ಅಮರಿಂದರ್ ಹೇಳಿಕೊಂಡಿದ್ದಾರೆ.

‘40 ವರ್ಷವಾಗಿರಬಹುದು ಅಥವಾ 80 ವರ್ಷವಾಗಿರಬಹುದು. ನನಗೆ ವಯಸ್ಸು ಎಂದಿಗೂ ಅಡಚಣೆಯಾಗಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.