ADVERTISEMENT

ಸೀಟು ಹಂಚಿಕೆ ಬಿಕ್ಕಟ್ಟಿನ ನಡುವೆಯೂ 'ಇಂಡಿಯಾ'ದಲ್ಲೇ ಉಳಿಯುವ ಭರವಸೆ ನೀಡಿದ ಮಮತಾ

ಪಿಟಿಐ
Published 11 ಜನವರಿ 2024, 5:06 IST
Last Updated 11 ಜನವರಿ 2024, 5:06 IST
<div class="paragraphs"><p>ಮಮತಾ ಬ್ಯಾನರ್ಜಿ</p></div>

ಮಮತಾ ಬ್ಯಾನರ್ಜಿ

   

ಕೋಲ್ಕತ್ತ: ಸೀಟು ಹಂಚಿಕೆಯ ವಿಚಾರವಾಗಿ ಕಾಂಗ್ರೆಸ್‌ನೊಂದಿಗೆ ಬಿರುಕು ಮೂಡಿದ್ದರೂ, ಬಿಜೆಪಿ ವಿರುದ್ಧದ ಹೋರಾಟದಲ್ಲಿ 'ಇಂಡಿಯಾ' ಮೈತ್ರಿಕೂಟದಲ್ಲೇ ಉಳಿಯುವುದಾಗಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ.

ಪಶ್ಚಿಮ ಮಿಡ್ನಾಪುರ ಜಿಲ್ಲಾ ಟಿಎಂಸಿ ಘಟಕದ ಆಂತರಿಕ ಸಭೆಯಲ್ಲಿ ಬುಧವಾರ ಮಮತಾ ತಮ್ಮ ನಿಲುವು ಪ್ರಕಟಿಸಿದ್ದಾರೆ.

ADVERTISEMENT

'ಬಿಜೆಪಿ ವಿರುದ್ಧದ ಹೋರಾಟದಲ್ಲಿ ಇಂಡಿಯಾ ಮೈತ್ರಿಕೂಟದಲ್ಲೇ ಉಳಿಯುವುದಾಗಿ ನಮ್ಮ ಪಕ್ಷದ ಮುಖ್ಯಸ್ಥೆ ಸ್ಪಷ್ಟವಾಗಿ ಹೇಳಿದ್ದಾರೆ. ಸಭೆಯಲ್ಲಿ ಸಿಪಿಐ(ಎಂ) ವಿರುದ್ಧ ಟೀಕೆ ಮಾಡಿದರೂ, ಕಾಂಗ್ರೆಸ್ ವಿರುದ್ಧ ಒಂದೇಒಂದು ಮಾತನ್ನೂ ಹೇಳಲಿಲ್ಲ' ಎಂದು ಸಭೆಯಲ್ಲಿ ಭಾಗಿಯಾಗಿದ್ದ ಹಾಗೂ ಹೆಸರು ಹೇಳಲು ಬಯಸದ ಟಿಎಂಸಿಯ ಹಿರಿಯರೊಬ್ಬರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನೊಂದಿಗೆ ಸೀಟು ಹಂಚಿಕೊಳ್ಳಲು ಟಿಎಂಸಿಯು 'ಮುಕ್ತವಾಗಿದೆ'. ಒಂದು ವೇಳೆ ಮಾತುಕತೆ ಯಶಸ್ವಿಯಾಗದಿದ್ದರೆ, ಏಕಾಂಗಿ ಸ್ಪರ್ಧೆಗೂ ಸಿದ್ಧ ಎಂದು ಟಿಎಂಸಿ ಮುಖಂಡ ಸುದೀಪ್‌ ಬಂಡೋಪಾಧ್ಯಾಯ ಇತ್ತೀಚೆಗೆ ಹೇಳಿದ್ದರು. ಸಭೆ ವೇಳೆ ಆ ಮಾತನ್ನೂ ಮಮತಾ ಪುನರುಚ್ಚರಿಸಿದ್ದಾರೆ.

ಸಿಪಿಐ(ಎಂ), ಕಾಂಗ್ರೆಸ್‌ ಮತ್ತು ಟಿಎಂಸಿ ಸೇರಿದಂತೆ ಒಟ್ಟು 28 ಪಕ್ಷಗಳು ಇಂಡಿಯಾ ಮೈತ್ರಿಕೂಟದಲ್ಲಿವೆ.

ಸಭೆ ನಂತರದ ಬೆಳವಣಿಗೆಯಲ್ಲಿ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಧೀರ್‌ ರಂಜನ್‌ ಚೌಧರಿ ಅವರು, ಸೀಟು ನೀಡುವಂತೆ ಆಡಳಿತ ಪಕ್ಷವನ್ನು ಬೇಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಲೆಕ್ಕಾಚಾರವೇನು? ಹಿಂದೆ ಏನಾಗಿದೆ?
ಪಶ್ಚಿಮ ಬಂಗಾಳದಲ್ಲಿರುವ 42 ಲೋಕಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ 4 ಸೀಟುಗಳನ್ನು ಹಂಚಿಕೆ ಮಾಡಲು ಟಿಎಂಸಿ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.

2019ರ ಚುನಾವಣೆಯಲ್ಲಿ ಟಿಎಂಸಿ 22 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಕಾಂಗ್ರೆಸ್‌ ಎರಡು ಮತ್ತು ಬಿಜೆಪಿ 18 ಕ್ಷೇತ್ರಗಳಲ್ಲಿ ಗೆದ್ದಿತ್ತು.

ಬಹರಾಮ್‌ಪುರ ಕ್ಷೇತ್ರದಿಂದ ಅಧೀರ್‌ ರಂಜನ್‌ ಚೌಧರಿ ಮತ್ತು ಮಾಲ್ಡಾ ದಕ್ಷಿಣ ಕ್ಷೇತ್ರದಿಂದ ಅಬು ಹಸೀಮ್‌ ಖಾನ್‌ ಚೌಧರಿ ಮಾತ್ರವೇ ಕಾಂಗ್ರೆಸ್‌ನಿಂದ ಗೆದ್ದಿದ್ದರು.

ಮಮತಾ ಅವರು 2023ರ ನವೆಂಬರ್‌ನಲ್ಲಿ ಕಾಂಗ್ರೆಸ್ ಮತ್ತು ಬದ್ಧ ಎದುರಾಳಿ ಸಿಪಿಐ(ಎಂ) ಜೊತೆ ಮೈತ್ರಿಯ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದರು. ಆದರೆ, ಮಮತಾ ಹೇಳಿಕೆಯನ್ನು ಕಾಂಗ್ರೆಸ್ ಮತ್ತು ಸಿಪಿಐ(ಎಂ) ಟೀಕಿಸಿದ್ದವು.

ಕೆಲವು ದಿನಗಳ ಬಳಿಕ ಮಮತಾ, ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ವಿರುದ್ಧ ಕಣಕ್ಕಿಳಿಯಲು ಸಿಪಿಐ(ಎಂ) ಮತ್ತು ಕಾಂಗ್ರೆಸ್‌ ಪಕ್ಷಗಳು ಬಿಜೆಪಿ ಜೊತೆ ಸೇರಿವೆ ಎಂದು ಆರೋಪಿಸಿದ್ದರು.

2001 ಹಾಗೂ 2011ರ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದ ಟಿಎಂಸಿ, 1977ರಿಂದ 2011ರ ವರೆಗೆ ಸತತ 34 ವರ್ಷ ಅಧಿಕಾರದಲ್ಲಿದ್ದ ಸಿಪಿಐ(ಎಂ) ಅನ್ನು ಅಧಿಕಾರದಿಂದ ಕೆಳಗಿಳಿಸಿತ್ತು. 2009ರ ಲೋಕಸಭೆ ಚುನಾವಣೆಯಲ್ಲೂ ಉಭಯ ಪಕ್ಷಗಳು ಒಂದಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.