ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಿವಾಜಿ ಮಹಾರಾಜರ ಸಮಾಧಿಗೆ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ
ರಾಯಗಢ (ಮಹಾರಾಷ್ಟ್ರ): ಮರಾಠರ ವಿರುದ್ಧ ಹೋರಾಡಿದ ಔರಂಗಜೇಬ್ ಸೋತ ವ್ಯಕ್ತಿಯಾದರೆ, ಮೊಘಲರ ಆಡಳಿತ ಮಣಿಸಿದ ಶ್ರೇಯ ಶಿವಾಜಿಗೆ ಸಲ್ಲಬೇಕು ಎಂದು ಅವರ ಶೌರ್ಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಶ್ಲಾಘಿಸಿದರು
ಶಿವಾಜಿ ಮಹಾರಾಜರ 345ನೇ ಪುಣ್ಯತಿಥಿಯಂದು ಶಾ ಅವರು ರಾಯಗಢ ಕೋಟೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರಲ್ಲದೆ, ಅವರ ಶೌರ್ಯವನ್ನು ಶ್ಲಾಘಿಸಿದರು.
‘ತನ್ನ ಬದುಕಿನುದ್ದಕ್ಕೂ ಮಹಾರಾಷ್ಟ್ರದಲ್ಲಿ ಮರಾಠರ ವಿರುದ್ಧ ಹೋರಾಡಿದ ಮೊಘಲ್ ದೊರೆ ಔರಂಗಜೇಬ್, ಒಬ್ಬ ಸೋತ ವ್ಯಕ್ತಿಯಾಗಿ ಮರಣ ಹೊಂದಿದ್ದಾನೆ. ಆತನ ಸಮಾಧಿ ಇದೇ ನೆಲದಲ್ಲಿದೆ’ ಎಂದು ಅವರು ಹೇಳಿದ್ದಾರೆ.
ಶಿವಾಜಿ ಮಹಾರಾಜರ ‘ಸ್ವಧರ್ಮ ಮತ್ತು ಸ್ವರಾಜ್ಯ’ ಆದರ್ಶಗಳು ಸ್ವಾತಂತ್ರ್ಯದ 100ನೇ ವರ್ಷದ ವೇಳೆಗೆ ಭಾರತವು ‘ಸೂಪರ್ ಪವರ್’ ಆಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಪ್ರೇರೇಪಿಸುತ್ತದೆ. ನರೇಂದ್ರ ಮೋದಿ ಸರ್ಕಾರವು ಶಿವಾಜಿ ಕೊಟ್ಟಿರುವ ಆದರ್ಶಗಳ ಮೇಲೆ ಕೆಲಸ ಮಾಡುತ್ತದೆ ಎಂದು ಅವರು ತಿಳಿಸಿದರು.
‘ಶಿವಾಜಿ ಅವರನ್ನು ಈ ರಾಜ್ಯಕ್ಕೆ ಮಾತ್ರ ಸೀಮಿತಗೊಳಿಸಬೇಡಿ ಎಂದು ನಾನು ಮಹಾರಾಷ್ಟ್ರದ ಜನರಿಗೆ ಮನವಿ ಮಾಡುತ್ತೇನೆ. ಅವರಲ್ಲಿದ್ದ ಇಚ್ಛಾಶಕ್ತಿ, ದೃಢ ನಿಶ್ಚಯ ಮತ್ತು ಧೈರ್ಯವು ಇಡೀ ದೇಶಕ್ಕೆ ಸ್ಪೂರ್ತಿ ನೀಡುತ್ತದೆ. ಅವರು ಸಮಾಜದ ಎಲ್ಲ ವರ್ಗದವರನ್ನು ತಂತ್ರಗಾರಿಕೆಯಿಂದ ಒಗ್ಗೂಡಿಸಿದ್ದರು’ ಎಂದರು.
ಮರಾಠ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಮತ್ತು ಶಿವಾಜಿ ಮಹಾರಾಜರ ಸಮಾಧಿಯನ್ನು ಹೊಂದಿರುವ ರಾಯಗಢ ಕೋಟೆಯು ಕೇವಲ ಒಂದು ಪ್ರವಾಸಿ ತಾಣವಾಗಿರದೆ, ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯ ಸೆಲೆಯಾಗಿದೆ ಎಂದು ಗೃಹ ಸಚಿವರು ಬಣ್ಣಿಸಿದರು.
ಮೊಘಲ್ ದೊರೆ ಔರಂಗಜೇಬ್‌ನ ಸಮಾಧಿಯನ್ನು ತೆರವು ಗೊಳಿಸಬೇಕೆಂದು ಆಗ್ರಹಿಸಿ ಕೆಲವು ಬಲಪಂಥೀಯ ಸಂಘಟನೆಗಳು ಈಚೆಗೆ ಪ್ರತಿಭಟನೆ ನಡೆಸಿದ್ದವು. ಈ ವಿಷಯವು ಮಹಾರಾಷ್ಟ್ರದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಸಿತ್ತು.
‘ಸ್ವಧರ್ಮ’ ರಕ್ಷಿಸುವ ಮತ್ತು ‘ಸ್ವರಾಜ್ಯ’ ಸ್ಥಾಪನೆಯ ಬೀಜವನ್ನು ಬಿತ್ತಿರುವ ಶ್ರೇಯ ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿಗೆ ಸಲ್ಲುತ್ತದೆಅಮಿತ್ ಶಾ ಗೃಹ ಸಚಿವ
ಎನ್‌ಸಿಪಿ ಸಂಸದ ಸುನಿಲ್ ತಟ್ಕರೆ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ರಾಯಗಢದ ತಮ್ಮ ನಿವಾಸದಲ್ಲಿ ಶನಿವಾರ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಿದರು. ಇದರ ಹಿಂದೆ ಯಾವುದೇ ‘ರಾಜಕೀಯ’ ಇಲ್ಲ ಎಂದು ತಟ್ಕರೆ ಸ್ಪಷ್ಟಪಡಿಸಿದ್ದಾರೆ.
ಶಿವಸೇನಾದ (ಶಿಂದೆ ಬಣ) ಸ್ಥಳೀಯ ನಾಯಕರು ಭೋಜನದಲ್ಲಿ ಪಾಲ್ಗೊಳ್ಳಲಿಲ್ಲ. ರಾಯಗಢ ಮತ್ತು ನಾಸಿಕ್ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕದ ವಿಚಾರದಲ್ಲಿ ಆಡಳಿತಾರೂಢ ‘ಮಹಾಯುತಿ’ಯಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ರಾಯಗಢ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಸುನಿಲ್ ಅವರ ಪುತ್ರಿ ಅದಿತಿ ತಟ್ಕರೆ ಕೂಡ ಒಬ್ಬರು. ಆದರೆ ಶಿವಸೇನಾ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ.
‘ಶಾ ಅವರು ತಟ್ಕರೆ ಜೊತೆ ಊಟ ಮಾಡಿದರೂ ರಾಯಗಢ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವು ಶಿವಸೇನಾ ಪಾಲಾಗಲಿದೆ’ ಎಂದು ಪಕ್ಷದ ವಕ್ತಾರ ಸಂಜಯ್ ಶಿರ್ಸಾಟ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.