ಅಮಿತ್ ಶಾ, ಉದ್ಧವ್ ಠಾಕ್ರೆ
ಮುಂಬೈ: ‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಬೆಂಬಲವಿಲ್ಲದೇ ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಗೃಹ ಸಚಿವ ಅಮಿತ್ ಶಾ ಟೀಕೆ ಮಾಡಲು ಧೈರ್ಯ ಮಾಡುತ್ತಿರಲಿಲ್ಲ’ ಎಂದು ಶಿವಸೇನಾ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಬೇಡ್ಕರ್, ಛತ್ರಪತಿ ಶಿವಾಜಿ ಮಹಾರಾಜ ಸೇರಿದಂತೆ ಮಹಾರಾಷ್ಟ್ರದ ಮಹಾನ್ ವ್ಯಕ್ತಿಗಳನ್ನು, ಅವರ ಪ್ರತಿಮೆಗಳಿಗೆ ಬಿಜೆಪಿ ಅಮಾನಿಸುತ್ತಲೇ ಬಂದಿದೆ’ ಎಂದು ಹೇಳಿದರು.
‘ಅಂಬೇಡ್ಕರ್ ಅವರ ಕುರಿತು ಅಮಿತ್ ಶಾ ಹೇಳಿಕೆ ಬಿಜೆಪಿಯ ದುರಹಂಕಾರವನ್ನು ತೋರಿಸುತ್ತದೆ. ಇಂತಹ ಹೇಳಿಕೆ ನೀಡಿರುವ ಅಮಿತ್ ಶಾ ವಿರುದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಅಂಬೇಡ್ಕರ್ ಕುರಿತು ಶಾ ಹೇಳಿಕೆಯನ್ನು ಎನ್‌ಡಿಎ ಮಿತ್ರಪಕ್ಷಗಳಾದ ಟಿಡಿಪಿ, ರಾಮ್‌ದಾಸ್ ಅಠವಾಳೆ ನೇತೃತ್ವದ ಆರ್‌ಪಿಐ ಮತ್ತು ಏಕನಾಥ ಶಿಂದೆ ನೇತೃತ್ವದ ಶಿವಾಸೇನಾ ಒಪ್ಪುತ್ತವೆಯೇ?’ ಎಂದು ಕೇಳಿದರು.
ಮಂಗಳವಾರ ರಾಜ್ಯಸಭೆಯಲ್ಲಿ ಮಾತನಾಡಿದ್ದ ಅಮಿತ್ ಶಾ, ‘ಅಂಬೇಡ್ಕರ್ ಹೆಸರು ಹೇಳುವುದು ಇದೀಗ ಫ್ಯಾಷನ್ ಆಗಿದ್ದು, ಅದರ ಬದಲು ದೇವರ ನಾಮ ಸ್ಮರಣೆ ಮಾಡಿದ್ದರೆ ಸ್ವರ್ಗ ಸಿಗುತ್ತಿತ್ತು’ ಎಂದು ಹೇಳಿದ್ದರು.
ಶಾ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳು ತೀವ್ರ ವಿರೋಧ ವ್ಯಕ್ತಡಿಸಿದ್ದು, ಕ್ಷಮೆಗೆ ಆಗ್ರಹಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.