ADVERTISEMENT

ಬ್ಯಾಂಕ್ ಖಾತೆಗಳು ನಿಷ್ಕ್ರಿಯ, ದೇಶದಲ್ಲಿ ಕಾರ್ಯಾಚರಣೆ ಸ್ಥಗಿತ: ಆಮ್ನೆಸ್ಟಿ

ಏಜೆನ್ಸೀಸ್
Published 29 ಸೆಪ್ಟೆಂಬರ್ 2020, 6:25 IST
Last Updated 29 ಸೆಪ್ಟೆಂಬರ್ 2020, 6:25 IST
ಆಮ್ನೆಸ್ಟಿ ಇಂಟರ್‌ನ್ಯಾಷನಲ್‌
ಆಮ್ನೆಸ್ಟಿ ಇಂಟರ್‌ನ್ಯಾಷನಲ್‌   

ಬೆಂಗಳೂರು: ಮಾನವ ಹಕ್ಕುಗಳ ಸಂಸ್ಥೆಯಾಗಿರುವ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಭಾರತದಲ್ಲಿ ಕಾರ್ಯಾಚರಣೆ ನಿಲ್ಲಿಸುತ್ತಿರುವುದಾಗಿ ಮಂಗಳವಾರ ಹೇಳಿದೆ. ಸಂಸ್ಥೆಗೆ ಸಂಬಂಧಿಸಿದ ಬ್ಯಾಂಕ್‌ ಖಾತೆಗಳನ್ನು ಸರ್ಕಾರ ನಿಷ್ಕ್ರಿಯಗೊಳಿಸಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದೆ.

'ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಬ್ಯಾಂಕ್‌ ಖಾತೆಗಳನ್ನು ಭಾರತ ಸರ್ಕಾರ ಸಂಪೂರ್ಣ ನಿಷ್ಕ್ರಿಯಗೊಳಿಸಿರುವುದು 2020ರ ಸೆಪ್ಟೆಂಬರ್‌ 10ರಂದು ತಿಳಿದು ಬಂದಿದೆ. ಇದರಿಂದಾಗಿ ಸಂಸ್ಥೆಯ ಎಲ್ಲ ಕಾರ್ಯಾಚರಣೆಗಳು ಸ್ಥಗಿತಗೊಂಡಿವೆ' ಎಂದು ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿಕೊಂಡಿದೆ.

ಸಂಸ್ಥೆಯು ಭಾರತ ಮತ್ತು ಅಂತರರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆಯಾಗಿರುವುದಾಗಿ ಜಾರಿ ನಿರ್ದೇಶನಾಲಯ (ಇಡಿ) ಕಳೆದ ವರ್ಷ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಪ್ರೈ.ಲಿ., ಬೆಂಗಳೂರು ಕಚೇರಿ ಮೇಲೆ ದಾಳಿ ನಡೆಸಿತ್ತು. ಕಾನೂನು ಉಲ್ಲಂಘಿಸಿ ಸಂಸ್ಥೆಯು ವಿದೇಶಿ ದೇಣಿಗೆ ಪಡೆದಿರುವ ಆರೋಪಗಳ ಮೇಲೆ ಸಿಬಿಐ ಕಳೆದ ವರ್ಷ ನವೆಂಬರ್‌ನಲ್ಲಿ ಆಮ್ನೆಸ್ಟಿ ಕಚೇರಿಯ ಮೇಲೆ ದಾಳಿ ಮಾಡಿತ್ತು.

ಹೋರಾಟಗಾರರಾದ ಸುಧಾ ಭಾರದ್ವಾಜ್‌, ರೋನಾ ವಿಲ್ಸನ್‌ ಹಾಗೂ ವರವರ ರಾವ್‌ ಅವರ ಬಂಧನ ಪ್ರಕರಣಗಳಲ್ಲಿ ಸರ್ಕಾರದ ಕ್ರಮಗಳಿಗೆ ವಿರೋಧ ವ್ಯಕ್ತಪಡಿಸಿದ್ದ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾಗೆ ತನ್ನ ಟ್ರಸ್ಟ್‌ ಮೂಲಕ ವಿದೇಶಿ ದೇಣಿಗೆ ಪಡೆಯುವುದಕ್ಕೆ ಸರ್ಕಾರ ಅನುಮತಿ ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.