ADVERTISEMENT

ಆಂಧ್ರ ಪ್ರದೇಶ: ಹೆಚ್ಚು ಮಕ್ಕಳು ಹೊಂದಲು ಹೆರಿಗೆ ರಜೆಗಿದ್ದ ಮಿತಿಗಳು ತೆರವು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2025, 15:23 IST
Last Updated 9 ಮಾರ್ಚ್ 2025, 15:23 IST
ಎನ್‌. ಚಂದ್ರಬಾಬು ನಾಯ್ಡು
ಎನ್‌. ಚಂದ್ರಬಾಬು ನಾಯ್ಡು   

ಹೈದರಾಬಾದ್‌: ದಕ್ಷಿಣ ರಾಜ್ಯಗಳಲ್ಲಿ ಜನನ ಪ್ರಮಾಣ ಕುಸಿತಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಮಹಿಳಾ ನೌಕರರಿಗೆ ಹೆರಿಗೆ ರಜೆ ಮೇಲಿದ್ದ ನಿರ್ಬಂಧಗಳನ್ನು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೆರವುಗೊಳಿಸಿದ್ದಾರೆ.

ಪ್ರಕಾಶಂ ಜಿಲ್ಲೆಯ ಮಾರ್ಕಾಪುರದಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಎಲ್ಲ ಮಹಿಳಾ ನೌಕರರು ಎಷ್ಟೇ ಮಕ್ಕಳನ್ನು ಹೊಂದಿದರೂ ಹೆರಿಗೆ ರಜೆ ನೀಡಲಾಗುವುದು’ ಎಂದು ಘೋಷಿಸಿದರು.

‘ಈ ಮೂಲಕ ಮುಖ್ಯಮಂತ್ರಿ ಅವರು, ಎಲ್ಲ ಮಹಿಳೆಯರೂ ಸಾಧ್ಯವಾದಷ್ಟು ಹೆಚ್ಚು ಮಕ್ಕಳನ್ನು ಹೊಂದುವಂತೆ ಸಂದೇಶ ರವಾನಿಸಿದ್ದಾರೆ’ ಎಂದು ಟಿಡಿಪಿ ನಾಯಕರೊಬ್ಬರು ಹೇಳಿದರು.

ADVERTISEMENT

ಹೆರಿಗೆ ರಜೆಯ ಅರ್ಹತೆ ಕುರಿತ ಸಂದೇಹವನ್ನು ಕಾನ್‌ಸ್ಟೆಬಲ್‌ ಒಬ್ಬರು ಶುಕ್ರವಾರವಷ್ಟೇ ಗೃಹ ಸಚಿವರ ಬಳಿ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ಅವರ ನಿರ್ಧಾರದಿಂದ ಈ ಬಗ್ಗೆ ಸ್ಪಷ್ಟತೆ ದೊರೆತಂತಾಗಿದೆ ಎಂದು ಅವರು ತಿಳಿಸಿದರು. 

ಇಲ್ಲಿಯವರೆಗೆ ಮಹಿಳಾ ನೌಕರರು ತಮ್ಮ ಮೊದಲ ಎರಡು ಹೆರಿಗೆಗಳಿಗೆ ತಲಾ ಆರು ತಿಂಗಳ ವೇತನ ಸಹಿತ ಹೆರಿಗೆ ರಜೆ ಪಡೆಯುತ್ತಿದ್ದರು. ಮುಖ್ಯಮಂತ್ರಿ ಅವರ ಹೊಸ ನೀತಿಯು ಈ ಮಿತಿಯನ್ನು ತೆಗೆದುಹಾಕುತ್ತದೆ.

ಆಗಸ್ಟ್ ನಿರ್ಧಾರದ ಬೆನ್ನಲ್ಲೇ ಕ್ರಮಗಳು:

ಎರಡು ದಶಕಗಳಷ್ಟು ಹಳೆಯದಾದ ಎರಡು ಮಕ್ಕಳ ನೀತಿಯು ರದ್ದುಗೊಳಿಸಲು ನಾಯ್ಡು ಸರ್ಕಾರ ಕಳೆದ  ಆಗಸ್ಟ್‌ನಲ್ಲಿ ನಿರ್ಧಾರ ತೆಗೆದುಕೊಂಡಿತ್ತು. ಅದರ ಬೆನ್ನಲ್ಲೇ ಕೆಲ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳು ರಾಜ್ಯದ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಈ ಹಿಂದೆ ಅವಕಾಶ ಇರಲಿಲ್ಲ. ಅಂಥವರನ್ನು ಅನರ್ಹಗೊಳಿಸಲಾಗಿತ್ತು. ಆ ನಿರ್ಬಂಧವನ್ನು ತೆಗೆಯಲು ಆಂಧ್ರ ಸರ್ಕಾರವು ‘ಎಪಿ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯ್ದೆ– 1955’, ‘ಎಪಿ ಪುರಸಭೆಗಳ ಕಾಯ್ದೆ– 1965’, ಮತ್ತು ‘ಎಪಿ ಪಂಚಾಯತ್‌ ರಾಜ್‌ ಕಾಯ್ದೆ– 1994’ಕ್ಕೆ ತಿದ್ದುಪಡಿ ತಂದಿತ್ತು.

ಜನಸಂಖ್ಯಾ ಬಿಕ್ಕಟ್ಟಿನ ಕುರಿತು ನಾಯ್ಡು ಅವರು ಪದೇ ಪದೇ ಕಳವಳ ವ್ಯಕ್ತಪಡಿಸಿದ್ದಾರೆ. ಜನನ ಪ್ರಮಾಣ ಕಡಿಮೆ ಆಗುವುದು ಮತ್ತು ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗಿ ಎದುರಾಗುವ ಸವಾಲುಗಳ ಬಗ್ಗೆ ಅವರು ಹಲವು ಬಾರಿ ಪ್ರಸ್ತಾಪಿಸಿದ್ದಾರೆ.

ಕ್ಷೇತ್ರ ಪುನರ್‌ ವಿಂಗಡಣೆಯ ಆತಂಕ:

ಕೆಲ ವರ್ಷಗಳಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಪ್ರಕ್ರಿಯೆಗಳು ಆರಂಭವಾಗುವ ಸಾಧ್ಯತೆಯದೆ. ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿರುವ ದಕ್ಷಿಣ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳು ಕಡಿಮೆಯಾಗುವ ಸಾಧ್ಯತೆಯಿದೆ ಎಂಬ ಆತಂಕ ಮತ್ತು ಅನುಮಾನಗಳು ವ್ಯಕ್ತವಾಗುತ್ತಿವೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ ಪ್ರಕಾರ, ಆಂಧ್ರ ಪ್ರದೇಶದ ಒಟ್ಟು ಫಲವತ್ತತೆ ದರ (ಟಿಎಫ್‌ಆರ್‌) 1.70ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿ 1.91ಕ್ಕಿಂತ ಕಡಿಮೆ.

ಹೀಗಾಗಿ ಕೆಲ ಕ್ರಮಗಳನ್ನು ತೆಗೆದುಕೊಳ್ಳಲು ಆಂಧ್ರ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ದಕ್ಷಿಣದ ಇತರ ರಾಜ್ಯಗಳಲ್ಲೂ ಟಿಎಫ್‌ಆರ್‌ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದೆ. ತೆಲಂಗಾಣದಲ್ಲಿ 1.82, ಕರ್ನಾಟಕದಲ್ಲಿ 1.70, ಕೇರಳದಲ್ಲಿ 1.80 ಮತ್ತು ತಮಿಳುನಾಡಿನಲ್ಲಿ 1.80ರಷ್ಟಿದೆ. 

3ನೇ ಮಗು ಹೆತ್ತರೆ ಪ್ರೋತ್ಸಾಹಧನ

ಮೂರನೇ ಮಕ್ಕಳನ್ನು ಹೊಂದುವ ಮಹಿಳೆಯರಿಗೆ ಪ್ರೋತ್ಸಾಹಧನ ನೀಡುವುದಾಗಿ ಆಂಧ್ರ ಪ್ರದೇಶದ ವಿಜಯನಗರಂನ ಸಂಸದ ಕಾಳಿಸೆಟ್ಟಿ ಅಪ್ಪಲನಾಯ್ಡು ಘೋಷಿಸಿದರು. ವಿಜಯನಗರಂನಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅಪ್ಪಲನಾಯ್ಡು ಅವರು ‘ಮೂರನೇ ಮಗು ಹೊಂದುವ ಮಹಿಳೆಗೆ ನನ್ನ ವೇತನದಿಂದ ಆರ್ಥಿಕ ನೆರವು ನೀಡುತ್ತೇನೆ. ಮೂರನೇ ಮಗು ಹೆಣ್ಣಾದರೆ ₹ 50000 ಹಾಗೂ ಗಂಡಾದರೆ ಒಂದು ಹಸು ನೀಡುತ್ತೇನೆ’ ಎಂದು ಪ್ರಕಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.