ಗರಿಕಾಪತಿ ನರಸಿಂಹ ರಾವ್
ಅಮರಾವತಿ: ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ಒಪ್ಪಿಗೆ ನೀಡಿದಂತೆ ಆಂಧ್ರಪ್ರದೇಶವನ್ನು ‘ತೆಲುಗು ನಾಡು’ ಎಂದು ಮರುನಾಮಕರಣ ಮಾಡಬೇಕು ಎಂದು ಖ್ಯಾತ ತೆಲುಗು ವಿದ್ವಾಂಸ ಗರಿಕಾಪತಿ ನರಸಿಂಹ ರಾವ್ ಒತ್ತಾಯಿಸಿದ್ದಾರೆ.
ಅಮಲಪುರಂನಲ್ಲಿ ನಡೆಯುತ್ತಿರುವ ವಿಶ್ವ ತೆಲುಗು ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ತಮಿಳುನಾಡು, ಕೇರಳಂ ಮುಂತಾದ ಹೆಸರುಗಳಲ್ಲಿ ಪ್ರತಿಫಲಿಸುವ ಗುರುತು ಮತ್ತು ಸಾಂಸ್ಕೃತಿಕ ಹೆಮ್ಮೆಯಿಂದ ಪ್ರೇರಿತರಾಗಿ ಆಂಧ್ರಪ್ರದೇಶವನ್ನು ‘ತೆಲುಗು ನಾಡು’ ಎಂದು ಮರುನಾಮಕರಣ ಮಾಡಬೇಕೆಂದು ಕರೆ ನೀಡಿದ್ದಾರೆ. ಈ ಮೂಲಕ ತೆಲುಗು ಭಾಷೆಯ ಶ್ರೀಮಂತ ಪರಂಪರೆಯನ್ನು ಎತ್ತಿ ಹಿಡಿಯಬೇಕು’ ಅವರು ಆಗ್ರಹಿಸಿದ್ದಾರೆ.
‘ಆಂಧ್ರಪ್ರದೇಶ ಎಂಬುದು ತೆಲುಗು ಹೆಸರಲ್ಲ. ಇದು ಹಿಂದಿ ಬೆಂಬಲಿತ ಮಧ್ಯಪ್ರದೇಶ ಮತ್ತು ಅರುಣಾಚಲ ಪ್ರದೇಶದಂತಹ ಉತ್ತರ ಭಾರತದ ರಾಜ್ಯಗಳಿಗೆ ಹೋಲುವಂತಿದೆ. ನಮ್ಮ ರಾಜ್ಯ (ಆಂಧ್ರಪ್ರದೇಶ) ಮತ್ತಷ್ಟು ಸಾಂಸ್ಕೃತಿಕ ಮಹತ್ವ ಹೊಂದಬೇಕಾದರೆ ತಮಿಳುನಾಡಿನಂತೆಯೇ ‘ತೆಲುಗು ನಾಡು’ ಎಂದು ಮರುನಾಮಕರಣ ಮಾಡುವುದು ಅತ್ಯಗತ್ಯ’ ಎಂದು ಅವರು ಹೇಳಿದ್ದಾರೆ.
ಹಿರಿಯ ನಟ, ರಾಜಕಾರಣಿ ಎನ್.ಟಿ. ರಾಮರಾವ್ ಅವರು ಆಂಧ್ರಪ್ರದೇಶವನ್ನು ‘ತೆಲುಗು ನಾಡು’ ಎಂದು ಘೋಷಿಸುವಂತೆ ಒತ್ತಾಯಿಸಿ ಚಳವಳಿಯನ್ನು ನಡೆಸಿದ್ದರು. ತೆಲುಗು ನಾಡು ಎಂಬುದಕ್ಕೆ ಸರಿಯಾದ ತೆಲುಗು ಉಚ್ಚಾರಣೆ ಇದೆ ಮತ್ತು ಇದು ಈ ರಾಜ್ಯಕ್ಕೆ ಸೂಕ್ತ ಹೆಸರು ಎಂದು ನರಸಿಂಹ ರಾವ್ ಅವರು ಅಭಿಪ್ರಾಯಪಟ್ಟಿದ್ದಾರೆ.
ತಮಿಳುನಾಡು ಮತ್ತು ಕೇರಳದ ಜನರು ಭಾಷೆಯ ಬಗ್ಗೆ ಹೊಂದಿರುವಷ್ಟು ಪ್ರೀತಿಯನ್ನು ನಮ್ಮ ರಾಜ್ಯದ ಜನರು ಹೊಂದಿಲ್ಲ. ಭಾಷೆಯ ವಿಷಯವಾಗಿ ರಾಜ್ಯದ ಜನರ ಮನಸ್ಥಿತಿ ಬದಲಾಗಬೇಕು. ಹಾಗೆಯೇ ಭವಿಷ್ಯದ ಪೀಳಿಗೆಗೆ ನಮ್ಮ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಂತಹ ಕೆಲಸ ಮಾಡಬೇಕು ಎಂದೂ ಅವರು ತಿಳಿಸಿದ್ದಾರೆ.
ಗರಿಕಾಪತಿ ನರಸಿಂಹ ರಾವ್ ಅವರ ಪ್ರಸ್ತಾಪವು ಗುರುತು, ಪರಂಪರೆ, ಭಾಷೆ ಮತ್ತು ಪ್ರಾದೇಶಿಕ ಭಾವನೆಗಳ ಕುರಿತು ರಾಜಕೀಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ‘ತೆಲುಗು ನಾಡು’ ಎಂಬ ಹೆಸರು ತೆಲುಗು ಜನರ ಭಾಷೆ ಮತ್ತು ಸಾಂಸ್ಕೃತಿಕ ಗುರುತನ್ನು ಪ್ರತಿಬಿಂಬಿಸುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಆಂಧ್ರಪ್ರದೇಶವನ್ನು ‘ತೆಲುಗು ನಾಡು’ ಎಂದು ಘೋಷಣೆ ಮಾಡಿದ್ದೆ ಆದಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ಪರಿಣಾಮಗಳು ಬೀರಬಹುದು ಎಂದು ವಿಮರ್ಶಕರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.