‘ಡೈರಿ ಆಫ್ ಹೋಂ ಮಿನಿಸ್ಟರ್’ ಕೃತಿ
ಎಕ್ಸ್ ಚಿತ್ರ
ಮುಂಬೈ: ಹಿರಿಯ ಮುಖಂಡ ಹಾಗೂ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ಪುಸ್ತಕ ‘ಡೈರಿ ಆಫ್ ಹೋಂ ಮಿನಿಸ್ಟರ್’ ಅನ್ನು ನಿಷೇಧಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ ಎಂದು ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಷಯ ಹಂಚಿಕೊಂಡಿರುವ ಅವರು, ‘ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಗೃಹಸಚಿವರಾಗಿ ಕೆಲಸ ಮಾಡಿದ ದೇಶಮುಖ್ ಅವರು ತಮ್ಮ ಕೃತಿಯಲ್ಲಿ ಬಹಳಷ್ಟು ರೋಚಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಕೃತಿಯನ್ನು ನಿಷೇಧಿಸಿದರೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿದಂತೆಯೇ’ ಎಂದು ಸುಳೆ ಹೇಳಿದ್ದಾರೆ.
‘ಎಷ್ಟೇ ಪ್ರಯತ್ನ ಪಟ್ಟರೂ, ಸತ್ಯದ ಧ್ವನಿಯನ್ನು ಎಂದಿಗೂ ಮತ್ತು ಶಾಶ್ವತವಾಗಿ ಹತ್ತಿಕ್ಕಲು ಸಾಧ್ಯವಿಲ್ಲ. ಸತ್ಯ ಎಂದಿದ್ದರೂ ಗೆದ್ದೇ ಗೆಲ್ಲುತ್ತದೆ’ ಎಂದಿದ್ದಾರೆ.
ದೇಶಮುಖ್ ಅವರ ಪುಸ್ತಕವು ಮರಾಠಿ ಭಾಷೆಯಲ್ಲಿದ್ದು, ಕಳೆದ ವರ್ಷ ಬಿಡುಗಡೆಯಾಗಿದೆ. ಉದ್ಯಮಿ ಮುಕೇಶ್ ಅಂಬಾನಿ ಮನೆ ಅಂಟಾಲಿಯಾ ಹೊರಗೆ ಬಾಂಬ್ ಸ್ಫೋಟಿಸುವ ಯತ್ನ, ₹100 ಕೋಟಿ ಲಂಚದ ಬೇಡಿಕೆ, ಹಣ ಅಕ್ರಮ ವರ್ಗಾವಣೆಯಲ್ಲಿ ಮಾಜಿ ಸಚಿವರ ಬಂಧನದಂತ ಪ್ರಕರಣಗಳ ಕುರಿತು ಬರೆದಿದ್ದಾರೆ.
ಕಾಂಗ್ರೆಸ್ ಕೂಡಾ ಈ ವಿಷಯ ಕುರಿತು ಆಕ್ರೋಶ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.