ಚೆನ್ನೈ: ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಜ್ಞಾನಶೇಖರನ್‌ಗೆ ಚೆನ್ನೈನ ಮಹಿಳಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಅಪರಾಧಿ ಜ್ಞಾನಶೇಖರನ್‌ಗೆ ಕನಿಷ್ಠ 30 ವರ್ಷಗಳ ಕಾಲ ಜೀವಾವಧಿ ಶಿಕ್ಷೆ ವಿಧಿಸಿ, ಇಲ್ಲಿನ ಮಹಿಳಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ನ್ಯಾಯಾಧೀಶೆ ಎಂ. ರಾಜಲಕ್ಷ್ಮಿ ಅವರು ಜ್ಞಾನಶೇಖರನ್ ಅಪರಾಧಿ ಎಂದು ಮೇ 28ರಂದು ಆದೇಶ ನೀಡಿದ್ದರು. ಶಿಕ್ಷೆ ಪ್ರಮಾಣವನ್ನು ಇಂದು (ಜೂನ್) 2ರಂದು ಪ್ರಕಟಿಸುವುದಾಗಿ ತಿಳಿಸಿದ್ದರು.
ಜ್ಞಾನಶೇಖರನ್ ವಿರುದ್ಧ ಪ್ರಾಸಿಕ್ಯೂಷನ್ 11 ಆರೋಪಗಳನ್ನು ಮಾಡಿದ್ದು, ಪೂರಕ ದಾಖಲೆ ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಿದೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದರು.
ಜ್ಞಾನಶೇಖರನ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆಯು ಕಳೆದ ವರ್ಷ ಡಿಸೆಂಬರ್ 23ರಂದು ಕೊಟ್ಟುಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಜ್ಞಾನಶೇಖರನ್ ಅವರನ್ನು ಬಂಧಿಸಲಾಗಿತ್ತು.
ಚೆನ್ನೈ ನಗರದ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಅಣ್ಣಾ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನೊಳಗೆ ಎರಡನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ರಸ್ತೆ ಬದಿಯ ವ್ಯಾಪಾರಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿ, ಆಕೆಯ ಸ್ನೇಹಿತನ ಮೇಲೂ ಹಲ್ಲೆ ಮಾಡಿರುವ ಘಟನೆ ನಡೆದಿತ್ತು.
2024ರ ಡಿಸೆಂಬರ್ 23 ರಂದು ಸಂಜೆ ಈ ಘಟನೆ ನಡೆದಿದ್ದು, ಸಂತ್ರಸ್ತರು ಡಿ.24 ರಂದು ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿ ಜ್ಞಾನಶೇಖರನ್ (37) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆರೋಪಿಯು ಪದೇ ಪದೇ ಅಪರಾಧ ಕೃತ್ಯಗಳನ್ನು ಎಸಗುವನಾಗಿದ್ದಾನೆ. ಈತನ ವಿರುದ್ಧ ಬಿಎನ್‌ಎಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
‘ಆರೋಪಿ, ವಿಶ್ವವಿದ್ಯಾನಿಲಯದ ಬಳಿಯ ಕೊಟ್ಟೂರ್‌ಪುರಂನಲ್ಲಿ ರಸ್ತೆ ಬದಿ ಉಪಾಹಾರ ಗೃಹ ನಡೆಸುತ್ತಿದ್ದ. ಕ್ಯಾಂಪಸ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ ನಂತರ ಆರೋಪಿಯನ್ನು ಬಂಧಿಸಲಾಯಿತು. ಕೃತ್ಯ ಎಸಗಿರುವುದನ್ನು ಆತ ಒಪ್ಪಿಕೊಂಡಿದ್ದಾನೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.