ADVERTISEMENT

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ: ಮತ್ತೊಂದು ಪ್ರಕರಣ ಬೆಳಕಿಗೆ

ಪಿಟಿಐ
Published 5 ಜನವರಿ 2023, 11:25 IST
Last Updated 5 ಜನವರಿ 2023, 11:25 IST
   

ನವದೆಹಲಿ: ನ್ಯೂಯಾರ್ಕ್-ದೆಹಲಿ ಮಾರ್ಗದ ಏರ್ ಇಂಡಿಯಾ ವಿಮಾನದಲ್ಲಿ ಪಾನಮತ್ತ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣದ ಬೆನ್ನಲ್ಲೇ, ಅದೇ ರೀತಿಯ ಮತ್ತೊಂದು ಘಟನೆ ಪ್ಯಾರಿಸ್-ದೆಹಲಿ ವಿಮಾನದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಏರ್ ಇಂಡಿಯಾ ವಿಮಾನ–142 ರಲ್ಲಿ ಡಿಸೆಂಬರ್ 6 ರಂದು ಈ ಘಟನೆ ನಡೆದಿದೆ. ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬ ಮಹಿಳೆ ಹೊದಿಕೆ ಮೇಲೆ ಮೂತ್ರ ವಿಸರ್ಜಿಸಿದ್ದ. ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಬಳಿಕ ವಿಮಾನದ ಪೈಲಟ್ ಈ ವಿಷಯವನ್ನು ವರದಿ ಮಾಡಿದ್ದರು. ತಪ್ಪು ಒಪ್ಪಿಕೊಂಡ ಪ್ರಯಾಣಿಕ ಕ್ಷಮೆಯಾಚನೆ ಪತ್ರ ಬರೆದುಕೊಟ್ಟಿದ್ದರಿಂದ ಯಾವುದೇ ಕ್ರಮ ತೆಗೆದುಕೊಳ್ಳದೇ ಬಿಟ್ಟು ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಯಾಣಿಕ ಯಾವ ತರಗತಿಯಲ್ಲಿ ಪ್ರಯಾಣಿಸುತ್ತಿದ್ದ ಎಂಬುದು ತಿಳಿದುಬಂದಿಲ್ಲ. ನವೆಂಬರ್ 26 ರಂದು ನ್ಯೂಯಾರ್ಕ್-ದೆಹಲಿ ಮಾರ್ಗದ ಏರ್ ಇಂಡಿಯಾ ವಿಮಾನದಲ್ಲಿ ನಡೆದ ಆಘಾತಕಾರಿ ಘಟನೆ ಸಂಭವಿಸಿದ ಹತ್ತು ದಿನಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

ADVERTISEMENT

ವಿಮಾನವು ದೆಹಲಿಯಲ್ಲಿ ಬೆಳಿಗ್ಗೆ 9:40 ರ ಸುಮಾರಿಗೆ ಲ್ಯಾಂಡ್‌ ಆಗಿತ್ತು. ಪ್ರಯಾಣಿಕ ಕುಡಿದ ಅಮಲಿನಲ್ಲಿದ್ದು, ಕ್ಯಾಬಿನ್ ಸಿಬ್ಬಂದಿಯ ಸೂಚನೆಗಳನ್ನು ಅನುಸರಿಸುತ್ತಿಲ್ಲ. ಮಹಿಳೆಯ ಹೊದಿಕೆ ಮೇಲೆ ಮೂತ್ರ ವಿಸರ್ಜಿಸಿದ್ದ ಎಂದು ವಿಮಾನ ನಿಲ್ದಾಣದ ನಿಯಂತ್ರಣ ಅಧಿಕಾರಿಗಳ ಬಳಿ ದೂರು ದಾಖಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಿಂದ ಕೆಳಗಿಳಿದ ಕೂಡಲೇ ಆತನನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಬಂಧಿಸಿತು. ಆದರೆ ಇಬ್ಬರು ಪ್ರಯಾಣಿಕರು ಪರಸ್ಪರ ರಾಜಿ ಮಾಡಿಕೊಂಡು, ಆರೋಪಿ ಲಿಖಿತ ಕ್ಷಮೆಯಾಚನೆ ಸಲ್ಲಿಸಿದ್ದ. ಮಹಿಳೆ ಕೂಡ ದೂರು ದಾಖಲಿಸಲು ಒಪ್ಪಿಗೆ ನೀಡಲಿಲ್ಲ. ಹೀಗಾಗಿ ನಂತರ ಆತನನ್ನು ಬಿಟ್ಟು ಕಳುಹಿಸಲಾಯಿತು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.