ಪೊವೆಲ್ ಜಾಬ್ಸ್ ಮತ್ತು ಕುಂಭಮೇಳದಲ್ಲಿ ಭಾಗವಹಿಸಿರುವ ಸಂತರು
–ರಾಯಿಟರ್ಸ್ ಚಿತ್ರಗಳು
ಮಹಾಕುಂಭ ನಗರ/ ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಗಂಗಾನದಿ ತಟದಲ್ಲಿ ನಡೆಯುತ್ತಿರುವ ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳದಲ್ಲಿ ಸಾಧು–ಸಂತರು ಸೇರಿದಂತೆ ದೇಶ–ವಿದೇಶಗಳ ಗಣ್ಯರು, ಅತಿ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.
ಐಫೋನ್ ತಯಾರಿಸುವ ಅಮೆರಿಕದ ಆ್ಯಪಲ್ ಕಂಪನಿಯ ಸಂಸ್ಥಾಪಕರಾಗಿದ್ದ ದಿ. ಸ್ಟೀವ್ ಜಾಬ್ಸ್ ಪತ್ನಿ ಪೊವೆಲ್ ಜಾಬ್ಸ್ ಅವರು ಈ ಬಾರಿಯ ಮಹಾಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ಆದರೆ, ಕೆಲಕಾಲ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
‘ಪೊವೆಲ್ ಜಾಬ್ಸ್ ಅವರು ಇದುವರೆಗೆ ಇಷ್ಟು ದೊಡ್ಡ ಜನಸಂದಣಿಯನ್ನು ನೋಡಿರಲಿಲ್ಲ. ಸದ್ಯ ಅವರು ಅಲರ್ಜಿಯಿಂದ ಬಳಲುತ್ತಿದ್ದು, ಕ್ಯಾಂಪ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ’ ಎಂದು ನಿರಂಜನಿ ಆಖಾರದ ಮಹಾಮಂಡಳೇಶ್ವರದ ಸ್ವಾಮಿ ಕೈಲಾಸಾನಂದ ತಿಳಿಸಿದ್ದಾರೆ.
‘ಆರೋಗ್ಯ ಚೇತರಿಸಿಕೊಂಡ ಬಳಿಕ ಪೊವೆಲ್ ಜಾಬ್ಸ್ ಅವರಿಗೆ ಪ್ರತ್ಯೇಕವಾಗಿ ಸ್ನಾನ ಮಾಡಲು ವ್ಯವಸ್ಥೆ ಮಾಡುತ್ತೇವೆ’ ಎಂದೂ ಸ್ವಾಮಿ ಹೇಳಿದ್ದಾರೆ.
ಜ. 13ರಂದೇ ಪ್ರಯಾಗ್‌ರಾಜ್‌ಗೆ ಬಂದಿರುವ ಪೊವೆಲ್ ಜಾಬ್ಸ್ ಅವರು ಕ್ಯಾಂಪ್‌ನಲ್ಲಿ ತಂಗಲಿದ್ದಾರೆ. ಮಹಾಕುಂಭದಲ್ಲಿ ಜ. 29ರವರೆಗೂ ಇರಲಿದ್ದಾರೆ ಎಂದು ವರದಿಯಾಗಿದೆ.
ಹಿಂದೂ ಪುರಾಣದಂತೆ ಬಹಳ ಹಿಂದಿನಿಂದಲೂ ಕಲ್ಪಾವಾಸ ಆಚರಿಸಿಕೊಂಡು ಬರಲಾಗುತ್ತಿದೆ. ಕಲ್ಪಾ ಎಂದರೆ ದೀರ್ಘ, ವಾಸ ಎಂದರೆ ಬದುಕುವುದು ಎಂದರ್ಥ. ಮಾಘ ಮಾಸದಲ್ಲಿ ಇದನ್ನು ಆಚರಿಸಲಾಗುತ್ತದೆ. ಇದರಲ್ಲಿ ಸೂರ್ಯೋದಯಕ್ಕೂ ಪೂರ್ವದಲ್ಲಿ ನದಿಯಲ್ಲಿ ಸ್ನಾನ, ನಂತರ ಧ್ಯಾನ, ಪೂಜೆ ಹಾಗೂ ಇತರ ಪೂಜಾ ಕಾರ್ಯಗಳಲ್ಲಿ ಭಾಗಿಯಾಗುವುದೂ ಸೇರಿದೆ.
ಈ ಬಾರಿ ವಿವಿಧ ಅಖಾಡಾಗಳ ಸಂತರು ಮತ್ತು ಸಾಧುಗಳು ಸೇರಿದಂತೆ ಸುಮಾರು 3.5 ಕೋಟಿ ಭಕ್ತರು ‘ಮಕರ ಸಂಕ್ರಾಂತಿ’ ದಿನದಂದು (ಮಂಗಳವಾರ) ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಈ ಬಾರಿಯ ಮಹಾಕುಂಭ ಮೇಳದ ಮೂರು ‘ಅಮೃತ ಸ್ನಾನ’ಗಳಲ್ಲಿ (ಶಾಹೀ ಸ್ನಾನ) ಇದು ಮೊದಲನೆಯದು.
12 ವರ್ಷಗಳ ಬಳಿಕ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸೋಮವಾರ ‘ಪುಷ್ಯ ಪೂರ್ಣಿಮಾ’ ದಿನದಂದು ಮೊದಲ ‘ಸ್ನಾನ’ ನಡೆದಿತ್ತು. ಸುಮಾರು 1.75 ಕೋಟಿ ಮಂದಿ ಪಾಲ್ಗೊಂಡಿದ್ದರು.
ಎರಡನೇ ದಿನವಾದ ಮಂಗಳವಾರ ವಿವಿಧ ಅಖಾಡಾಗಳ ಸದಸ್ಯರು ‘ಅಮೃತ ಸ್ನಾನ’ ಮಾಡಿದ್ದಾರೆ. ಶ್ರೀ ಪಂಚಾಯತಿ ಆಖಾಡಾ ಮಹಾನಿರ್ವಾಣಿ ಸದಸ್ಯರು ಮೊದಲನೆಯವರಾಗಿ ಸ್ನಾನದಲ್ಲಿ ಪಾಲ್ಗೊಂಡರೆ, ಶ್ರೀ ಶಂಭು ಪಂಚಾಯತಿ ಅಟಲ್ ಅಖಾಡಾ ಸೇರಿದಂತೆ ಇತರ ಅಖಾಡಾಗಳ ಸದಸ್ಯರು ಬಳಿಕ ಸ್ನಾನ ಘಟ್ಟಗಳತ್ತ ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.