ADVERTISEMENT

ಸರಪಂಚಗೆ ₹ 10,000 ಸಂಬಳ, ಗ್ರಾಮಕ್ಕೆ 10 ಲಕ್ಷ: ಗುಜರಾತ್‌ನಲ್ಲಿ ಕೇಜ್ರಿವಾಲ್‌

ಪಿಟಿಐ
Published 3 ಸೆಪ್ಟೆಂಬರ್ 2022, 13:58 IST
Last Updated 3 ಸೆಪ್ಟೆಂಬರ್ 2022, 13:58 IST
ರಾಜ್‌ಕೋಟ್‌: ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್‌ ಅವರು ಸ್ಥಳೀಯರ ಜೊತೆ ಮಾತುಕತೆ ನಡೆಸಿದರು | ಪಿಟಿಐ ಚಿತ್ರ
ರಾಜ್‌ಕೋಟ್‌: ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್‌ ಅವರು ಸ್ಥಳೀಯರ ಜೊತೆ ಮಾತುಕತೆ ನಡೆಸಿದರು | ಪಿಟಿಐ ಚಿತ್ರ   

ಸುರೇಂದ್ರನಗರ್‌: ಗುಜರಾತ್‌ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಗ್ರಾಮ ಪಂಚಾಯಿತಿ ಅಧ್ಯಕ್ಷ (ಸರಪಂಚ)ರಿಗೆ ಮಾಸಿಕ ₹ 10 ಸಾವಿರ ಸಂಬಳ ನೀಡುವುದಾಗಿ ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್‌ ಭರವಸೆ ನೀಡಿದ್ದಾರೆ. ಗ್ರಾಮಕ್ಕೆ ರಾಜ್ಯ ಸರ್ಕಾರದಿಂದ ನೇರವಾಗಿ ₹ 10 ಲಕ್ಷ ಅನುದಾನವನ್ನು ಕೊಡುವುದಾಗಿಯೂ ತಿಳಿಸಿದ್ದಾರೆ.

ಸರಪಂಚ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುತ್ತಾನೆ ಮತ್ತು ಗ್ರಾಮಸ್ಥರು ಆತನಿಗೆ ಗೌರವ ನೀಡುತ್ತಾರೆ. ಆತ ಗ್ರಾಮದ ಮುಖಂಡನಾಗುತ್ತಾನೆ. ಚುನಾವಣೆ ಗೆದ್ದ ಬಳಿಕ ಜನರಿಗಾಗಿ ಕೆಲಸ ಮಾಡಲು ಆತನ ಜೇಬಿನಿಂದಲೇ ಖರ್ಚು ಮಾಡುತ್ತಾನೆ. ಆತನಿಗೆ ಎಲ್ಲಿಂದಲೂ ದುಡ್ಡು ಬರುವುದಿಲ್ಲ. ಗ್ರಾಮಕ್ಕೆ ಅನುದಾನ ಬಯಸಿ ಶಾಸಕ ಅಥವಾ ಜಿಲ್ಲಾ ಅಧಿಕಾರಿಗಳನ್ನು ಕೇಳಿದರೆ ಕಮಿಷನ್‌ ಕೇಳುತ್ತಾರೆ ಎಂದು ಸ್ಥಳೀಯ ರಾಜಕಾರಣದ ಸಮಸ್ಯೆಯ ಕುರಿತಾಗಿ ಕೇಜ್ರಿವಾಲ್‌ ಮಾತನಾಡಿದರು.

ಇಂತಹ ಅವ್ಯವಸ್ಥೆಯನ್ನು ಅಂತ್ಯಗೊಳಿಸುತ್ತೇವೆ. ಸರಪಂಚಗೆ ಮಾಸಿಕ ಸಂಬಳ ನಿಗದಿ ಮಾಡುತ್ತೇವೆ. ₹ 10 ಸಾವಿರ ಎಂಬುದು ಸಣ್ಣ ಮೊತ್ತ ಎಂಬುದು ಗೊತ್ತಿದೆ. ಆದರೆ ಇದು ಆರಂಭಿಕ ಸಂಬಳ. ನಂತರ ನಿಧಾನಕ್ಕೆ ಏರಿಕೆ ಮಾಡುತ್ತೇವೆ. ಪ್ರತಿಯೊಬ್ಬ ಸರಪಂಚನಿಗೂ ಮಾಸಿಕ ₹ 10 ಸಾವಿರ ಸಿಗುತ್ತದೆ ಎಂದು ಕೇಜ್ರಿವಾಲ್‌ ವಿವರಿಸಿದರು.

ADVERTISEMENT

ಗ್ರಾಮಕ್ಕೆ ರಾಜ್ಯ ಸರ್ಕಾರದಿಂದ ನೇರವಾಗಿ ₹ 10 ಲಕ್ಷ ಅನುದಾನ ಕೊಡುವುದರಿಂದ ಕಮಿಷನ್‌ ದಂಧೆಗೆ ತಡೆ ಬೀಳುತ್ತದೆ. ಗ್ರಾಮದ ಅಭಿವೃದ್ಧಿಗೆ ಸರಪಂಚ ಶಾಸಕ ಅಥವಾ ಜಿಲ್ಲಾ ಅಧಿಕಾರಿಗಳ ಮುಂದೆ ಕೈಚಾಚಿ ಕೂರಬೇಕು ಎಂದಿಲ್ಲ ಎಂದರು.

ಸುರೇಂದ್ರನಗರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಜ್ರಿವಾಲ್‌, ಎಎಪಿ ಅಧಿಕಾರಕ್ಕೆ ಬಂದರೆ 2023 ಫೆಬ್ರವರಿ 28ರ ಒಳಗೆ ಕೊಟ್ಟಿರುವ ಎಲ್ಲ ಭರವಸೆಗಳನ್ನು ಪೂರೈಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.