ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಅರವಿಂದ ಕೇಜ್ರಿವಾಲ್
–ಪಿಟಿಐ ಚಿತ್ರ
ನವದೆಹಲಿ: ಪಂಜಾಬ್‌ನ ಎಎಪಿ ಘಟಕದಲ್ಲಿ ಭಿನ್ನಮತದ ವದಂತಿಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಸಚಿವರು ಮತ್ತು ಶಾಸಕರೊಂದಿಗೆ ಸಭೆ ನಡೆಸುತ್ತಿದ್ದಾರೆ.
ಇತ್ತೀಚಿನ ದೆಹಲಿ ಚುನಾವಣೆಯಲ್ಲಿ ಎಎಪಿ ಪಕ್ಷಕ್ಕಾದ ಹಿನ್ನಡೆ ಮತ್ತು 2027ರ ಪಂಜಾಬ್ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುವ ಬಗ್ಗೆ ಅರವಿಂದ ಕೇಜ್ರಿವಾಲ್ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಪಂಜಾಬ್ ಸಂಸದರಾದ ರಾಘವ್ ಚಡ್ಡಾ ಮತ್ತು ಸಂದೀಪ್ ಪಾಠಕ್ ಸೇರಿದಂತೆ ಪಕ್ಷ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಂಜಾಬ್‌ನ ಸಂಗ್ರೂರ್ ಶಾಸಕಿ ನರಿಂದರ್ ಕೌರ್ ಮಾತನಾಡಿ, ‘ಇದು ಕೇವಲ ಸಾಮಾನ್ಯ ಸಭೆಯಾಗಿದೆ ಅಷ್ಟೇ. ಪಕ್ಷದಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳು ಇಲ್ಲ. ಈ ಹಿಂದೆಯೂ ಇಂತಹ ಹಲವು ಸಭೆಗಳು ಪಂಜಾಬ್ ಮತ್ತು ದೆಹಲಿಯಲ್ಲಿ ನಡೆದಿವೆ. ಸದ್ಯ ದೆಹಲಿಯಲ್ಲಿ ನಮ್ಮ ಪಕ್ಷ ಪ್ರಬಲ ಪ್ರತಿಪಕ್ಷದ ಪಾತ್ರವನ್ನು ನಿರ್ವಹಿಸುವುದರ ಜತೆಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಜನಾದೇಶ ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಎಪಿಯಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ಕಾಂಗ್ರೆಸ್ ಆರೋಪ ಕುರಿತು ಪ್ರತಿಕ್ರಿಯಿಸಿರುವ ಕೌರ್, ‘ದೇಶದಲ್ಲಿ ಇಷ್ಟು ವರ್ಷಗಳ ಕಾಲ ಆಡಳಿತ ನಡೆಸಿದ ನಿಮ್ಮ ಪಕ್ಷ (ಕಾಂಗ್ರೆಸ್) ದೆಹಲಿಯಲ್ಲಿ ಶೂನ್ಯ ಸಾಧನೆ ಮಾಡಿರುವ ಬಗ್ಗೆ ಯೋಚಿಸಬೇಕು’ ಎಂದು ತಿರುಗೇಟು ನೀಡಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 48 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ, ಸರ್ಕಾರ ರಚಿಸಲು ಸಜ್ಜಾಗಿದೆ. ಇತ್ತ ಎಎಪಿ 22 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಪ್ರಮುಖ ಎಎಪಿ ನಾಯಕರು ಸೋಲು ಅನುಭವಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.