
ಅಹಮದಾಬಾದ್: 2013ರ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪುಗೆ ವೈದ್ಯಕೀಯ ಚಿಕಿತ್ಸೆಗೆ ಅನುಕೂಲವಾಗುವಂತೆ ಗುಜರಾತ್ ಹೈಕೋರ್ಟ್ ಗುರುವಾರ ಆರು ತಿಂಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.
ರಾಜಸ್ಥಾನ ಹೈಕೋರ್ಟ್ ಆಸಾರಾಂಗೆ ಜಾಮೀನು ಮಂಜೂರು ಮಾಡಿರುವ ಆದೇಶದ ಆಧಾರದ ಮೇಲೆ ಜಾಮೀನು ನೀಡುತ್ತಿರುವುದಾಗಿ ನ್ಯಾಯಮೂರ್ತಿ ಇಲೇಶ್ ವೋರಾ ಮತ್ತು ಆರ್.ಟಿ ವಚ್ಚಾನಿ ಅವರ ವಿಭಾಗೀಯ ಪೀಠವು ಮೌಖಿಕವಾಗಿ ತಿಳಿಸಿದೆ. ಸುಮಾರು ಒಂದು ವಾರದ ಹಿಂದೆಯಷ್ಟೆ ರಾಜಸ್ಥಾನ ಹೈಕೋರ್ಟ್ ಕೂಡಾ ಇದೇ ರೀತಿಯ ಆದೇಶನ್ನು ನೀಡಿತ್ತು.
ರಾಜಸ್ಥಾನ ಹೈಕೋರ್ಟ್‌ನ ಆದೇಶವನ್ನು ಪೀಠದ ಮುಂದೆ ಸಲ್ಲಿಸಿದ ಆಸಾರಾಂ ಪರ ವಕೀಲರು, ತಮ್ಮ ಕಕ್ಷಿದಾರನ ವೈದ್ಯಕೀಯ ಸ್ಥಿತಿಯನ್ನು ಪರಿಗಣಿಸುವಂತೆ ಕೋರಿದ್ದರು. ರಾಜ್ಯ ಸರ್ಕಾರದ ಪರ ವಕೀಲರು ಈ ಅರ್ಜಿಯನ್ನು ವಿರೋಧಿಸಿ, ಜೋಧ್‌ಪುರ ಜೈಲಿನಲ್ಲಿ ನೀಡಲು ಸಾಧ್ಯವಾಗದ ಚಿಕಿತ್ಸಾ ಸೌಲಭ್ಯಗಳನ್ನು, ಅಹಮದಾಬಾದ್‌ನ ಸಬರಮತಿ ಕೇಂದ್ರ ಜೈಲಿನಲ್ಲಿ ಆಸಾರಾಂಗೆ ಒದಗಿಸಬಹುದು ಎಂದು ಹೇಳಿದ್ದಾರೆ.
2023ರ ಜನವರಿಯಲ್ಲಿ ಗಾಂಧಿನಗರದ ನ್ಯಾಯಾಲಯವು ಅತ್ಯಾಚಾರ ಪ್ರಕರಣದಲ್ಲಿ ಆಸಾರಾಂಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆತ 2001ರಿಂದ 2006ರವರೆಗೆ ಅಹಮದಾಬಾದ್‌ನ ಮೊಟೇರಾದಲ್ಲಿರುವ ತನ್ನ ಆಶ್ರಮದಲ್ಲಿ ತನ್ನ ಶಿಷ್ಯೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದನು. ಈ ಬಗ್ಗೆ ಆತನ ವಿರುದ್ಧ 2013ರಲ್ಲಿ ಪ್ರಕರಣ ದಾಖಲಾಗಿತ್ತು.
ಅಲ್ಲದೆ, ರಾಜಸ್ಥಾನದ ತನ್ನ ಆಶ್ರಮದಲ್ಲಿ ಕೂಡ 2013ರ ವೇಳೆಗೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಆತ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.