
ಗುವಾಹಟಿ: ಅಸ್ಸಾಂ ವಿಧಾನಸಭೆಯಲ್ಲಿ ಇಂದು (ಗುರುವಾರ) ‘ಬಹುಪತ್ನಿತ್ವ ನಿಷೇಧ ಮಸೂದೆ–2025’ಯನ್ನು ಅಂಗೀಕರಿಸಲಾಗಿದೆ.
ಗೃಹ ಖಾತೆಯನ್ನೂ ಹೊಂದಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಮಂಗಳವಾರ ವಿಧಾನಸಭೆಯಲ್ಲಿ ಬಹು ಪತ್ನಿತ್ವ ನಿಷೇಧ ಮಸೂದೆಯನ್ನು ಮಂಡಿಸಿದ್ದರು. ಬಹುಪತ್ನಿತ್ವವನ್ನು ಅಪರಾಧ ಎಂದು ಪರಿಗಣಿಸಿ ಏಳು ವರ್ಷ ಜೈಲು ಮತ್ತು ದಂಡ ವಿಧಿಸುವ ಅವಕಾಶಗಳನ್ನು ಮಸೂದೆಯಲ್ಲಿ ಕಲ್ಪಿಸಲಾಗಿದೆ.
‘ಬಹುಪತ್ನಿತ್ವ ವಿವಾಹಗಳನ್ನು ತೊಲಗಿಸುವ ಉದ್ದೇಶವನ್ನು ಮಸೂದೆ ಹೊಂದಿದೆ. ಈಗಾಗಲೇ ವೈವಾಹಿಕ ಜೀವನ ನಡೆಸುತ್ತಿರುವ ವ್ಯಕ್ತಿ ಇನ್ನೊಂದು ಮದುವೆ ಆಗುವುದು, ಕಾನೂನುಬದ್ಧವಾಗಿ ವಿಚ್ಛೇದನ ಪಡೆಯದೇ ಇರುವ, ಮದುವೆ ರದ್ದಾಗದೇ ಇರುವ ಆತ/ಆಕೆಯ ಜೊತೆ ವೈವಾಹಿಕ ಜೀವನ ನಡೆಸುವುದನ್ನು ಮಸೂದೆಯು ಬಹುಪತ್ನಿತ್ವ ಎಂದು ಪರಿಗಣಿಸುತ್ತದೆ’ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು 6ನೇ ಪರಿಚ್ಛೇದದ (ಶೆಡ್ಯೂಲ್) ಅಡಿ ಬರುವ ಪ್ರದೇಶಗಳನ್ನು ಈ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.