ADVERTISEMENT

ಅಸ್ಸಾಂನಲ್ಲಿ ಕ್ರಮೇಣ ಎರಡು ಮಕ್ಕಳ ನೀತಿ ಜಾರಿಗೆ: ಹಿಮಂತ ಬಿಸ್ವ ಶರ್ಮಾ

ಪಿಟಿಐ
Published 19 ಜೂನ್ 2021, 11:08 IST
Last Updated 19 ಜೂನ್ 2021, 11:08 IST
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ   

ಗುವಾಹಟಿ: ಅಸ್ಸಾಂನಲ್ಲಿ ಕ್ರಮೇಣ ಎರಡು ಮಕ್ಕಳ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಸ್ಸಾಂ ಸಿಎಂ, 'ರಾಜ್ಯದಿಂದ ಪ್ರಾಯೋಜಿತ ನಿರ್ದಿಷ್ಟ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಎರಡು ಮಕ್ಕಳನ್ನು ಮಿತಿಗೊಳಿಸುವ ಯೋಜನೆಗೆ ಪ್ರೋತ್ಸಾಹ ನೀಡಲಿದ್ದೇವೆ' ಎಂದಿದ್ದಾರೆ.

ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ಪ್ರಯೋಜನ ನೀಡುತ್ತಿರುವುದರಿಂದ ಈ ಪ್ರಸ್ತಾವಿತ ಜನಸಂಖ್ಯಾ ನಿಯಂತ್ರಣ ನೀತಿಯು ಅಸ್ಸಾಂನ ಎಲ್ಲ ಯೋಜನೆಗಳಲ್ಲಿ ತಕ್ಷಣ ಅನ್ವಯವಾಗುವುದಿಲ್ಲ ಎಂದವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

'ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಶಾಲೆಗಳು, ಕಾಲೇಜುಗಳಲ್ಲಿ ಉಚಿತ ಪ್ರವೇಶಾತಿ ಅಥವಾ ಮನೆ ಪಡೆಯುವಂತಹ ಯೋಜನೆಗಳಲ್ಲಿ ಎರಡು ಮಕ್ಕಳ ನೀತಿಯನ್ನು ಹೇರಲು ಸಾಧ್ಯವಿಲ್ಲ. ಆದರೆ ರಾಜ್ಯ ಸರ್ಕಾರವುಪ್ರಾರಂಭಿಸುವ ವಸತಿ ಯೋಜನೆಗಳಂತಹ ಕಾರ್ಯಕ್ರಮಗಳಲ್ಲಿಎರಡು ಮಕ್ಕಳ ಮಿತಿಯನ್ನು ಪರಿಚಯಿಸಬಹುದಾಗಿದೆ. ಕ್ರಮೇಣ ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆಗಳಲ್ಲೂ ಜನಸಂಖ್ಯಾ ನಿಯಂತ್ರಣ ನೀತಿಯು ಆಳವಡಿಕೆಯಾಗಲಿದೆ' ಎಂದು ಹೇಳಿದ್ದಾರೆ.

ಹಾಗಿದ್ದರೂ ತಮ್ಮ ಕುಟುಂಬದ ವಿರುದ್ಧ ವಿರೋಧ ಪಕ್ಷಗಳು ಟೀಕೆ ಮಾಡುತ್ತಿರುವುದನ್ನು ಸಿಎಂ ಖಂಡಿಸಿದ್ದಾರೆ. ಹಿಮಂತ ಬಿಸ್ವ ಅವರಿಗೆ ಐದು ಮಂದಿ ಸಹೋದರರಿದ್ದಾರೆ.

'1970ರ ದಶಕದಲ್ಲಿ ನನ್ನ ಹೆತ್ತವರು ಏನು ಮಾಡಿದರು ಅಥವಾ ಜನರು ಏನು ಮಾಡಿದರು ಎಂಬುದನ್ನು ಈಗ ಚರ್ಚಿಸುವುದರಲ್ಲಿ ಅರ್ಥವಿಲ್ಲ. ವಿರೋಧ ಪಕ್ಷಗಳು ಈ ವಿಷಯಗಳ ಬಗ್ಗೆ ಚರ್ಚಿಸಿ ನಮ್ಮನ್ನು 70ರ ದಶಕಕ್ಕೆ ತಳ್ಳುತ್ತಿವೆ' ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.