ADVERTISEMENT

Election Results 2022 | ನಾಳೆ ಫಲಿತಾಂಶ; ಉಳಿಯುವುದೇ ಅಧಿಕಾರ, ಯಾರಿಗೆ ಬಹುಮತ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮಾರ್ಚ್ 2022, 9:35 IST
Last Updated 9 ಮಾರ್ಚ್ 2022, 9:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಹಾಗೂ ಗೋವಾದಲ್ಲಿ ವಿವಿಧ ಹಂತಗಳಲ್ಲಿ ನಡೆದಿರುವ ಮತದಾನ ಪ್ರಕ್ರಿಯೆಯು ಸೋಮವಾರ ಕೊನೆಗೊಂಡಿದೆ. ಪಂಚರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ನಾಳೆ (ಮಾರ್ಚ್‌ 10) ಹೊರ ಬರಲಿದೆ. ಈಗಾಗಲೇ ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ. ಆಡಳಿತಾರೂಢ ಪಕ್ಷಗಳು ತಮ್ಮ ಅಧಿಕಾರ ಉಳಿಸಿಕೊಳ್ಳುತ್ತವೆಯೇ ಎಂಬುದು ಸದ್ಯದ ಕುತೂಹಲವಾಗಿದೆ.

ಪ್ರಸ್ತುತ ಪಂಜಾಬ್‌ನಲ್ಲಿ ಕಾಂಗ್ರೆಸ್, ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ ಬಿಜೆಪಿ ಆಡಳಿತವಿದೆ. ಮತದಾನೋತ್ತರ ಸಮೀಕ್ಷೆಗಳ ಪ್ರಕಾರ, ಬಿಜೆಪಿ ಮೂರು ರಾಜ್ಯಗಳಲ್ಲಿ ಸರ್ಕಾರ ಉಳಿಸಿಕೊಂಡು ಅಧಿಕಾರಕ್ಕೆ ಬರಲಿದೆ. ಆದರೆ, ಈ ಬಾರಿ 2017ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಬಿಜೆಪಿ ಆರಿಸಿ ಬರಲಿದೆ ಎಂದು ಬಹುತೇಕ ಎಲ್ಲಾ ಸಮೀಕ್ಷೆಗಳು ಹೇಳಿವೆ.

ಪಂಜಾಬ್‌ನಲ್ಲಿ ಎಎಪಿ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು, ಸರ್ಕಾರ ರಚಿಸಲಿದೆ. ಕಾಂಗ್ರೆಸ್‌ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ ಎಂದು ಸಮೀಕ್ಷೆಗಳು ಹೇಳಿವೆ. ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ. ಉತ್ತರಾಖಂಡದಲ್ಲಿ ಬಿಜೆಪಿಗೆ ಕಾಂಗ್ರೆಸ್‌ ಭಾರಿ ಪೈಪೋಟಿ ನೀಡುವುದಾದರೂ, ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇರುವುದಾಗಿ ಸಮೀಕ್ಷೆಯ ಅಂಕಿ–ಅಂಶಗಳು ಹೇಳುತ್ತವೆ.

ADVERTISEMENT

ಆದರೆ, 'ಮತದಾನೋತ್ತರ ಸಮೀಕ್ಷೆಗಳು ಸುಳ್ಳಾಗಲಿವೆ. ತಮ್ಮ ಪಕ್ಷವೇ ಸರ್ಕಾರ ರಚಿಸಲಿದೆ' ಎಂದು ವಿರೋಧ ಪಕ್ಷಗಳು ಪ್ರತಿಕ್ರಿಯಿಸಿವೆ.

ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ಪೈಪೋಟಿ ಇದೆ. ಎಎಪಿ ಮತ್ತು ಟಿಎಂಸಿ ಅದೃಷ್ಟ ಪರೀಕ್ಷೆಗೆ ಇಳಿದಿವೆ. ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಸಾಧ್ಯತೆಗಳನ್ನು ಸೂಚಿಸಿದ್ದು, ಫಲಿತಾಂಶ ಘೋಷಣೆಗೂ ಮುನ್ನವೇ ಅಭ್ಯರ್ಥಿಗಳನ್ನು ರೆಸಾರ್ಟ್‌ಗೆ ಸ್ಥಳಾಂತರಿಸಲು ಕಾಂಗ್ರೆಸ್ ಮುಂದಾಗಿದೆ.

2017ರ ವಿಧಾನಸಭಾ ಚುನಾವಣೆ ಫಲಿತಾಂಶ

ಉತ್ತರ ಪ್ರದೇಶ: 403 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 312 ಕ್ಷೇತ್ರಗಳಲ್ಲಿ ಗೆಲುವು

ಬಿಜೆಪಿ–312
ಎಸ್‌ಪಿ– 47
ಬಿಎಸ್‌ಪಿ– 19
ಕಾಂಗ್ರೆಸ್‌– 07

***
ಪಂಜಾಬ್‌: 117 ವಿಧಾನಸಭಾ ಕ್ಷೇತ್ರಗಳ ಪೈಕಿ 77 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು

ಕಾಂಗ್ರೆಸ್‌– 77
ಎಎಪಿ– 20
ಲೋಕ ಇನ್‌ಸಾಫ್‌ ಪಾರ್ಟಿ– 02
ಶಿರೋಮಣಿ ಅಕಾಲಿ ದಳ (ಎಸ್‌ಎಡಿ)– 15
ಬಿಜೆಪಿ– 3

***
ಉತ್ತರಾಖಂಡ: 70 ವಿಧಾನಸಭಾ ಕ್ಷೇತ್ರಗಳ ಪೈಕಿ 57 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು

ಬಿಜೆಪಿ– 57
ಕಾಂಗ್ರೆಸ್‌– 11

***
ಗೋವಾ: 40 ವಿಧಾನಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು

ಕಾಂಗ್ರೆಸ್‌– 17
ಬಿಜೆಪಿ– 13
ಎಂಎಜಿ– 3
ಜಿಎಫ್‌ಎ– 3
ಪಕ್ಷೇತರರು– 3

***
ಮಣಿಪುರ: 60 ವಿಧಾನಸಭಾ ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು

ಕಾಂಗ್ರೆಸ್‌–28
ಬಿಜೆಪಿ– 21
ನಾಗಾ ಪೀಪಲ್ಸ್‌ ಫ್ರಂಟ್‌– 04
ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ– 04

****

2022ರ ವಿಧಾನಸಭಾ ಚುನಾವಣೆ: ಮತದಾನೋತ್ತರ ಸಮೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.