
ಅತಿಶಿ ಮತ್ತು ಕಪಿಲ್ ಮಿಶ್ರಾ
ನವದೆಹಲಿ: ವಿಧಾನಸಭೆಯ ವಿಡಿಯೊ ತುಣುಕಿನ ಆಧಾರದ ಮೇಲೆ ದೆಹಲಿ ಕಾನೂನು ಸಚಿವ ಕಪಿಲ್ ಮಿಶ್ರಾ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಸಂಬಂಧ ದೆಹಲಿ ವಿಧಾನಸಭೆಯ ಸ್ಪೀಕರ್ ವಿಜೇಂದರ್ ಗುಪ್ತಾ ಅವರು ಪಂಜಾಬ್ ಪೊಲೀಸರಿಗೆ ನೋಟಿಸ್ ನೀಡಿದ್ದಾರೆ. ಈ ಕುರಿತು ಉತ್ತರಿಸಲು ಅಧಿಕಾರಿಗಳು 10 ದಿನ ಕಾಲಾವಕಾಶ ಕೋರಿದ್ದಾರೆ.
ಕಪಿಲ್ ಮಿಶ್ರಾ ವಿರುದ್ಧ ಎಫ್‌ಐಆರ್ ದಾಖಲಿಸಿದ ಪಂಜಾಬ್ ಪೊಲೀಸ್ ಇಲಾಖೆಯ ಮೂವರು ಹಿರಿಯ ಅಧಿಕಾರಿಗಳಿಗೆ ದೆಹಲಿ ವಿಧಾನಸಭೆಯ ಸ್ಪೀಕರ್ ವಿಜೇಂದರ್ ಗುಪ್ತಾ ಅವರು ಜ.10ರಂದು ನೋಟಿಸ್ ನೀಡಿದ್ದರು.
ದೆಹಲಿ ವಿಧಾನಸಭೆಯ ಹಕ್ಕುಚ್ಯುತಿ ಮಾಡಿರುವ ಆರೋಪದ ಮೇರೆಗೆ ಪಂಜಾಬ್‌ನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ), ವಿಶೇಷ ಡಿಜಿಪಿ (ಸೈಬರ್ ಅಪರಾಧ) ಮತ್ತು ಜಲಂದರ್ ಪೊಲೀಸ್ ಕಮಿಷನರ್ ಅವರಿಗೆ ನೋಟಿಸ್ ನೀಡಲಾಗಿದ್ದು, 48 ಗಂಟೆಗಳಲ್ಲಿ ಉತ್ತರಿಸುವಂತೆ ಸೂಚಿಸಲಾಗಿದೆ ಎಂದು ಗುಪ್ತಾ ಹೇಳಿದ್ದರು.
‘ದೆಹಲಿ ವಿಧಾನಸಭೆಯಲ್ಲಿನ ವಿಡಿಯೊ ತುಣುಕನ್ನು ಆಧರಿಸಿ ಪಂಜಾಬ್ ಪೊಲೀಸರು ಎಫ್‌ಐಆರ್ ದಾಖಲಿಸಿರುವುದು ದುರದೃಷ್ಟಕರ’ ಎಂದ ಅವರು, ‘ಪೊಲೀಸರ ಈ ಕ್ರಮವು ಸದನದ ಗೌರವಕ್ಕೆ ಚ್ಯುತಿ ತಂದಿದೆ. ನೋಟಿಸ್‌ಗೆ ಪ್ರತಿಕ್ರಿಯೆ ಬಂದ ಬಳಿಕ ಆ ಅಧಿಕಾರಿಗಳ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬಹುದು ಎಂಬುದನ್ನು ನಿರ್ಧರಿಸಲಾಗುವುದು’ ಎಂದಿದ್ದರು.
ದೆಹಲಿ ವಿಧಾನಸಭೆ ವಿರೋಧ ಪಕ್ಷದ ನಾಯಕಿ ಅತಿಶಿ ಅವರು ವಿಧಾನಸಭೆಯಲ್ಲಿ ಗುರುತೇಜ್ ಬಹದ್ದೂರ್ ಅವರನ್ನು ಅವಮಾನಿಸಿದ್ದಾರೆ ಎಂದು ಸಚಿವ ಕಪಿಲ್ ಮಿಶ್ರಾ ಮತ್ತು ಕೆಲ ಬಿಜೆಪಿ ಶಾಸಕರು ಆರೋಪಿಸಿದ್ದಾರೆ.
ಅತಿಶಿ ಅವರು ಹೇಳಿದ್ದನ್ನು ತಿರುಚಿರುವ ವಿಡಿಯೊವನ್ನು ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿರುವ ಜಲಂಧರ್ ಪೊಲೀಸ್ ಕಮಿಷನರೇಟ್, ಮಿಶ್ರಾ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ಪಂಜಾಬ್‌ನ ಎಎಪಿ ಆಡಳಿತವು ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಸ್ಪೀಕರ್ ದೂರಿದ್ದಾರೆ. ಸಿಖ್ ಗುರುವನ್ನು ಅಮಾನಿಸಿರುವ ಅತಿಶಿ ಅವರ ವಿಧಾನಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.