ನವದೆಹಲಿ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ‘ಮಹಾ ಕುಂಭ’ದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ ಅದು ‘ಮೃತ್ಯು ಕುಂಭ’ವಾಗಿ ಪರಿವರ್ತನೆ ಆಗಿದೆ ಎಂಬ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆಯನ್ನು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತೀವ್ರವಾಗಿ ಖಂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಸನಾತನ ಧರ್ಮವನ್ನು ಅವಮಾನಿಸುವುದು ಪ್ರತಿಪಕ್ಷಗಳ ಸ್ವಭಾವವಾಗಿದೆ. ಗಂಗಾ ನದಿಯ ಹರಿವಿನಂತೆ ಸಾವಿರಾರು ವರ್ಷಗಳಿಂದ ಭಾರತದ ಸಂಸ್ಕೃತಿ ಮುಂದುವರೆದಿದೆ. ಮಮತಾ ಬ್ಯಾನರ್ಜಿ ಅವರು ಜನರ ನಂಬಿಕೆಯ ಮೇಲೆ ದಾಳಿ ಮಾಡುವುದು ಅಪರಾಧ’ ಎಂದು ಕಿಡಿಕಾರಿದ್ದಾರೆ.
‘ಸನಾತನ ಧರ್ಮದತ್ತ ಬೆರಳು ತೋರಿಸುವ ಮೂಲಕ ಅವರು (ವಿಪಕ್ಷ ನಾಯಕರು) ತಮ್ಮನ್ನು ತಾವು ಹಾನಿಗೊಳಿಸಿಕೊಳ್ಳುತ್ತಾರೆ. ಜನರ ನಂಬಿಕೆ ಮತ್ತು ಭಾವನೆಗಳ ಮೇಲೆ ದಾಳಿ ಮಾಡುವುದು ಮಹಾ ಅಪರಾಧ’ ಎಂದು ಚೌಹಾಣ್ ಗುಡುಗಿದ್ದಾರೆ.
ಜನವರಿ 29ರಂದು ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 30 ಜನರು ಮೃತಪಟ್ಟಿದ್ದು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಬಳಿಕ ಫೆ. 15ರಂದು ನವದೆಹಲಿ ರೈಲು ನಿಲ್ದಾಣದಲ್ಲಿ ಮಹಾಕುಂಭಕ್ಕೆ ತೆರಳುವ ಭಕ್ತರ ನಡುವೆ ನೂಕುನುಗ್ಗಲು ಉಂಟಾದ ಪರಿಣಾಮ ಕಾಲ್ತುಳಿತ ಸಂಭವಿಸಿ 18 ಮಂದಿ ಸಾವಿಗೀಡಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.