ADVERTISEMENT

ನೂತನ ವಕ್ಫ್ ಕಾನೂನು: BJPಯಿಂದ ಜಾಗೃತಿ ಅಭಿಯಾನ; ಉರ್ದು ಭಾಷೆಯಲ್ಲಿ ಕರಪತ್ರ

ಪಿಟಿಐ
Published 10 ಏಪ್ರಿಲ್ 2025, 13:24 IST
Last Updated 10 ಏಪ್ರಿಲ್ 2025, 13:24 IST
<div class="paragraphs"><p>ನವದೆಹಲಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ನೂತನ ವಕ್ಫ್ ತಿದ್ದುಪಡಿ ಮಸೂದೆಯ ಜನಜಾಗರಣ ಸಮಾವೇಶದ ಮಾಹಿತಿಯನ್ನು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ನೀಡಿದರು</p></div>

ನವದೆಹಲಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ನೂತನ ವಕ್ಫ್ ತಿದ್ದುಪಡಿ ಮಸೂದೆಯ ಜನಜಾಗರಣ ಸಮಾವೇಶದ ಮಾಹಿತಿಯನ್ನು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ನೀಡಿದರು

   

ಪಿಟಿಐ ಚಿತ್ರ

ನವದೆಹಲಿ: ನೂತನ ವಕ್ಫ್‌ ತಿದ್ದುಪಡಿ ಕಾಯ್ದೆ ಕುರಿತು ಮುಸ್ಲಿಮರನ್ನೂ ಒಳಗೊಂಡು ಜನರಲ್ಲಿ ಜಾಗೃತಿ ಮೂಡಿಸಲು ಏ. 20ರಿಂದ ರಾಷ್ಟ್ರಮಟ್ಟದ ಜಾಗೃತಿ ಸಮಾವೇಶಗಳನ್ನು ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ. 

ADVERTISEMENT

ಕಾಯ್ದೆ ಕುರಿತು ವಿರೋಧ ಪಕ್ಷಗಳ ಟೀಕೆಗೆ ಪ್ರತ್ಯುತ್ತರವಾಗಿ ಪಕ್ಷವು 'ಜನಜಾಗರಣ’ ಸಮಾವೇಶ ಆಯೋಜಿಸುತ್ತಿದ್ದು, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈ ಕುರಿತು ಗುರುವಾರ ಮಾಹಿತಿ ನೀಡಿದ್ದಾರೆ.

'ತಮ್ಮ ಮತ ಬ್ಯಾಂಕ್‌ ರಾಜಕೀಯಕ್ಕಾಗಿ ಕಾಯ್ದೆ ವಿರುದ್ಧ ವಿರೋಧ ಪಕ್ಷಗಳು ಮುಸ್ಲಿಮರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿವೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಲಾಗುತ್ತಿರುವ ಈ ಸಮಾವೇಶದಲ್ಲಿ ರಾಷ್ಟ್ರವ್ಯಾಪಿ ಪಕ್ಷದ ವಿವಿಧ ಹಂತಗಳ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಮುಸ್ಲಿಮರು ಮತ್ತು ಮಹಿಳೆಯರು ವಕ್ಫ್‌ ವ್ಯವಸ್ಥೆಯ ಮುಖ್ಯ ಘಟ್ಟಗಳಲ್ಲಿ ಮತ್ತು ಕಲ್ಯಾಣ ಕಾರ್ಯಕ್ರಮಗಳಲ್ಲಿದ್ದು ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕ ಆಡಳಿತ ಮತ್ತು ಪರಿಣಾಮಕಾರಿ ನಿರ್ವಹಣೆ ತರಬೇಕೆಂಬ ಯೋಜನೆ ಹೊಂದಿದೆ. ಈ ಉದ್ದೇಶದೊಂದಿಗೆ ಆಯೋಜಿಸಲಾಗುತ್ತಿರುವ ಸಮಾವೇಶದಲ್ಲಿ, ವಕ್ಫ್‌ ಮಂಡಳಿ ಸದಸ್ಯರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಪಕ್ಷದ ಮುಖಂಡರು, ಅಲ್ಪಸಂಖ್ಯಾತ ವಿಭಾಗದ ಪ್ರಮುಖರು ಈ ಪಾಲ್ಗೊಳ್ಳಲಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ವಕ್ಫ್‌ ಮಂಡಳಿಯಲ್ಲಿ ಮುಸ್ಲಿಮೇತರರು ಇರುವುದರ ಹಿಂದೆ ಆಸ್ತಿಗಳ ನಿರ್ವಹಣೆಯ ಉದ್ದೇಶವಿದೆಯೇ ಹೊರತು, ಧರ್ಮಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಮುಸ್ಲಿಂ ಮುಖಂಡರ ಸಮ್ಮುಖದಲ್ಲಿ ಪಕ್ಷದ ಪ್ರಮುಖರು ದೇಶದ ಹಲವೆಡೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಕಾನೂನು ಕುರಿತು ಸಹಜವಾಗಿ ಮೂಡಬಹುದಾದ ಪ್ರಶ್ನೆಗಳು ಹಾಗೂ ಉತ್ತರಗಳನ್ನು ಉರ್ದುವಿನಲ್ಲಿ ಮುದ್ರಿಸಿ ಹಂಚಲು ಪಕ್ಷ ನಿರ್ಧರಿಸಿದೆ. ಇದು ಮೇ 5ರವರೆಗೂ ದೇಶವ್ಯಾಪಿ ಮುಂದುವರಿಯಲಿದ್ದು, ಇದರ ಉಸ್ತುವಾರಿಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ಅಗರವಾಲ್‌ ಮತ್ತು ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಮಾಲ್ ಸಿದ್ದಿಕಿ ನಿರ್ವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನೂತನ ವಕ್ಫ್ ತಿದ್ದುಪಡಿ ಕಾನೂನನ್ನು ಪ್ರಶ್ನಿಸಿ ವಿರೋಧ ಪಕ್ಷಗಳು ಮತ್ತು ಕೆಲ ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿವೆ. ಇವುಗಳ ವಿಚಾರಣೆ ಮೇ 16ಕ್ಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.