ನ್ಯಾಯಾಲಯ ತೀರ್ಪು
ಅಯೋಧ್ಯೆ: ಮಕ್ಕಳನ್ನು ಅಪಹರಿಸಿ, ಭಿಕ್ಷಾಟನೆಗೆ ಕಳುಹಿಸುತ್ತಿದ್ದ ವ್ಯಕ್ತಿಗೆ ವಿಶೇಷ ನ್ಯಾಯಾಲಯ 28 ವರ್ಷ ಜೈಲು ಶಿಕ್ಷೆ ಮತ್ತು ₹1.5 ಲಕ್ಷ ದಂಡ ವಿಧಿಸಿದ ಘಟನೆ ಅಯೋಧ್ಯೆಯಲ್ಲಿ ನಡೆದಿದೆ.
ಶಿಕ್ಷೆಗೆ ಒಳಗಾದವನನ್ನು ಜಿತೇಂದ್ರ ಮಿಶ್ರಾ ಎನ್ನಲಾಗಿದ್ದು, ಈತ ಅಯೋಧ್ಯೆಯಲ್ಲಿ ಅಂಗಡಿಯನ್ನು ಇಟ್ಟುಕೊಂಡಿದ್ದ.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ವಿಜಯ್ ಕುಮರ್ ವಿಶ್ವಕರ್ಮ ಅವರು, ಮಿಶ್ರಾ ಬಿಹಾರದಿಂದ ಒಂದು, ಎರಡು ಮತ್ತು ಐದು ವರ್ಷದ ಮೂವರು ಮಕ್ಕಳನ್ನು ಅಪಹರಣ ಮಾಡಿ ಅಯೋಧ್ಯೆಯಲ್ಲಿ ಭಕ್ತರ ಬಳಿ ಭಿಕ್ಷೆ ಬೇಡಲು ಕಳುಹಿಸುತ್ತಿದ್ದ ಎನ್ನುವುದು ಸಾಬೀತಾದ ಕಾರಣ ಅಪರಾಧಿ ಎಂದು ತೀರ್ಪು ನೀಡಿದ್ದಾರೆ.
2023ರ ಆ.26ರಂದು ಸ್ಥಳೀಯರಾದ ಅಂಕುರ್ ಪಾಂಡೆ ಎನ್ನುವವರು ಮಿಶ್ರಾ, ಮಕ್ಕಳಿಗೆ ಹೊಡೆಯುತ್ತಿರುವುದನ್ನು ಮತ್ತು ಕೆಲ ವಸ್ತುಗಳನ್ನು ಮಾರಾಟ ಮಾಡುವಂತೆ ಬಲವಂತ ಮಾಡುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದಾಗ ಮಕ್ಕಳ ಮೇಲೆ ಹಲ್ಲೆಯಾಗಿರುವುದನ್ನು ಕಂಡು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ತನಿಖೆಯ ವೇಳೆ ಮಕ್ಕಳನ್ನು ಅಪಹರಣ ಮಾಡಿರುವುದನ್ನು ಮಿಶ್ರಾ ಒಪ್ಪಿಕೊಂಡಿದ್ದನು.
2023ರ ಆ.27ರಂದು ಮಿಶ್ರಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ನ್ಯಾಯಾಲಯ ಮಿಶ್ರಾ ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ಮತ್ತು ದಂಡ ವಿಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.