ADVERTISEMENT

ಅಯೋಧ್ಯೆ ವಿವಾದ: ತೀರ್ಪು ನೀಡಲು ಸುಪ್ರೀಂ ವಿಳಂಬ, ಸಂಸತ್ ಸುಗ್ರೀವಾಜ್ಞೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 2:21 IST
Last Updated 16 ನವೆಂಬರ್ 2018, 2:21 IST
   

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್‌ ಮುಂದೂಡುತ್ತಿದ್ದು, ನಿರ್ಮಾಣ ಕಾಮಗಾರಿ ಆರಂಭಿಸುವ ಸಲುವಾಗಿ ಸಂಸತ್‌ನಲ್ಲಿ ಶೀಘ್ರವೇ ಶಾಸನಬದ್ಧ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಯೋಗ ಗುರು ಬಾಬಾ ರಾಮ್‌ದೇವ್ ಒತ್ತಾಯಿಸಿದ್ದಾರೆ.

ಈ ವಿಚಾರದಲ್ಲಿ ತೀರ್ಪು ನೀಡಲು ಸುಪ್ರೀಂ ವಿಳಂಬ ಮಾಡುತ್ತಿದೆ ಎಂದಿರುವ ಬಾಬಾ, ‘ಸುಪ್ರೀಂ ಕೋರ್ಟ್‌ನಿಂದ ಯಾವ ಭರವಸೆಯೂ ಕಾಣುತ್ತಿಲ್ಲ. ಇನ್ನು ಕೇವಲ ಒಂದು ಆಯ್ಕೆಯಷ್ಟೇ ಉಳಿದಿದೆ. ರಾಮಮಂದಿರ ನಿರ್ಮಾಣ ಕಾಮಗಾರಿ ಆರಂಭಿಸಲು ಸಂಸತ್‌ ನಲ್ಲಿ ಸುಗ್ರೀವಾಜ್ಞೆ ಹೊರಡಿಸಬೇಕು. ಅದು ಶಾಸನಬದ್ಧವಾಗಬೇಕು. ಸುಪ್ರೀಂ ಕೋರ್ಟ್‌ ಆದೇಶ ಅಥವಾ ಸಂಸತ್‌ ಸುಗ್ರೀವಾಜ್ಞೆ ಇಲ್ಲದೆ ನಿರ್ಮಾಣ ಕಾರ್ಯ ಆರಂಭಿಸಿದರೆ, ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತೇ ಸರ್ವೋಚ್ಛ. ದೇಗುಲ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲೇಬೇಕಾದ ಅಗತ್ಯವಿದ್ದು, ಯಾರೊಬ್ಬರೂ ಇದನ್ನು ವಿರೋಧಿಸುವುದಿಲ್ಲ ಎಂಬ ನಂಬಿಕೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಅಯೋಧ್ಯೆ ಭೂವಿವಾದಕ್ಕೆ ಸಂಬಂಧಿಸಿದಂತೆ2010ರಲ್ಲಿ ತೀರ್ಪು ನೀಡಿದ್ದ ಅಲಹಾಬಾದ್‌ ಹೈಕೋರ್ಟ್‌,ವಿವಾದಿತ ಭೂಪ್ರದೇಶವನ್ನು ನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಸುನ್ನಿ ವಕ್ಫ್‌ ಮಂಡಳಿಗೆ ಸಮನಾಗಿ ಹಂಚಿಕೆ ಮಾಡಿತ್ತು. ಇದನ್ನು ಪ್ರಶ್ನಿಸಿ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು.

ಅರ್ಜಿಗಳ ವಿಚಾರಣೆ ಮುಂದೂಡಿರುವ ಸುಪ್ರೀಂ ಕೋರ್ಟ್‌ 2019ರ ಜನವರಿಯಲ್ಲಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.

ಈ ವಿಚಾರವಾಗಿ ಅಕ್ಟೋಬರ್‌ 29ರಂದು ಹೇಳಿಕೆ ನೀಡಿದ್ದ ರಾಮ್‌ದೇವ್‌, ‘ದೇವಾಲಯ ನಿರ್ಮಾಣ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ’ ಎಂದಿದ್ದರು.

1528 ರಲ್ಲಿ ಅಯೋಧ್ಯಾದಲ್ಲಿ ಮೊಘಲ್ ಚಕ್ರವರ್ತಿ ಬಾಬರ್ ನಿರ್ಮಿಸಿದ ಬಾಬರಿ ಮಸೀದಿ ಡಿಸೆಂಬರ್ 6, 1992 ರಂದು ಹಿಂದೂ ಕಾರ್ಯಕರ್ತರಿಂದ ನೆಲಸಮವಾಗಿ ನೆಲಸಮವಾಯಿತು. ಮೂಲತಃ ರಾಮ್ ಮಂದಿರವನ್ನು ಧ್ವಂಸಗೊಳಿಸಿದ ನಂತರ ಈ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.