ADVERTISEMENT

ಬುಲೆಟ್‌ಗೆ ಬದಲಾಗಿ ಮತದಾನದ ಶಕ್ತಿಯನ್ನು ಬಳಸಿ: ಅನುರಾಗ್ ಠಾಕೂರ್

ಏಜೆನ್ಸೀಸ್
Published 4 ಫೆಬ್ರುವರಿ 2020, 6:47 IST
Last Updated 4 ಫೆಬ್ರುವರಿ 2020, 6:47 IST
ಕೇಂದ್ರ ಹಣಕಾಸು ಖಾತೆ ರಾಜ್ಯಸಚಿವ ಅನುರಾಗ್ ಸಿಂಗ್ ಠಾಕೂರ್
ಕೇಂದ್ರ ಹಣಕಾಸು ಖಾತೆ ರಾಜ್ಯಸಚಿವ ಅನುರಾಗ್ ಸಿಂಗ್ ಠಾಕೂರ್   

ನವದೆಹಲಿ: ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ ಮತ್ತು ಜನರು ತಮ್ಮ ಮತದಾನದ ಶಕ್ತಿಯನ್ನು ಬುಲೆಟ್‌ಗಳ ಮೇಲೆ ಪ್ರಾಬಲ್ಯ ಸಾಧಿಸುವ ರೀತಿಯಲ್ಲಿ ಬಳಸಬೇಕು ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿರುವಾಗಲೇ ರಾಜಕೀಯ ಪಕ್ಷಗಳಿಂದ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಪ್ರಚಾರದ ವೇಳೆ ಪ್ರಚೋದನಾಕಾರಿ ಭಾಷಣ ಮಾಡಿದ್ದ ಅನುರಾಗ್ ಸಿಂಗ್ ಠಾಕೂರ್ ಇದೀಗ ಭಿನ್ನ ರಾಗ ಹಾಡಿದ್ದಾರೆ.

ಸುದ್ದಿಸಂಸ್ಥೆ ಎಎನ್‌ಐನೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ. ಮತದಾನದ ಹಕ್ಕು ಸೂಕ್ತ ರೀತಿಯಲ್ಲಿ ಬಳಕೆಯಾಗಬೇಕು ಮತ್ತು ಅದನ್ನುಬುಲೆಟ್‌ಗಳ ಮೇಲೆ ಪ್ರಾಬಲ್ಯ ಸಾಧಿಸುವ ರೀತಿಯಲ್ಲಿ ಬಳಸಬೇಕು ಎಂದು ಹೇಳಿದ್ದಾರೆ.

ADVERTISEMENT

ಜನವರಿ 27ರಂದು ದೆಹಲಿ ಪ್ರಚಾರ ಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಅನುರಾಗ್‌ ಠಾಕೂರ್‌, ‘ದೇಶದ್ರೋಹಿಗಳನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದಾಗ, ನೆರೆದಿದ್ದ ಜನರುಗುಂಡಿಕ್ಕಿ ಕೊಲ್ಲಬೇಕು’ ಎಂದು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಜನವರಿ 31ರಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮುಖಂಡ ವಿಷ್ಣು ಪ್ರಸಾದ್ .ಕೆ ಅವರು ಬಿಜೆಪಿ ನಾಯಕನ ವಿರುದ್ಧ ದೂರು ದಾಖಲಿಸಿದ್ದರು.

ರಾಜಧಾನಿಯ ಚುನಾವಣೆಯನ್ನು ಮುಂದೂಡಲು ಬಿಜೆಪಿ ಬಯಸುತ್ತಿದೆ ಎನ್ನುವುದನ್ನು ಅಲ್ಲಗಳೆದ ಠಾಕೂರ್, ಒಂದು ವೇಳೆ ನಾವು ಚುನಾವಣೆಯನ್ನು ಮುಂದೂಡಲು ಬಯಸಿದರೆ ಅಧಿಕ ಸಂಖ್ಯೆಯಲ್ಲಿರುವ ಎಎಪಿಯ ನಾಯಕರು ಬಿಜೆಪಿಗೆ ಸೇರುತ್ತಿರಲಿಲ್ಲ. ಬದಲಿಗೆ ದೆಹಲಿಯ ಅಭಿವೃದ್ಧಿಗೆ ವೇಗ ನೀಡುವುದಕ್ಕೆ ಅವರು ಬಿಜೆಪಿಗೆ ಸೇರಿದ್ದಾರೆ ಎಂದು ತಿಳಿಸಿದ್ದಾರೆ.

ಎಎಪಿಯು ದೆಹಲಿ ಜನರಿಗೆ ಅಗತ್ಯ ಕುಡಿಯುವ ನೀರನ್ನು ಒದಗಿಸುವಲ್ಲಿ ವಿಫಲವಾಗಿದೆ ಮತ್ತು ಕಳೆದ ಐದು ವರ್ಷಗಳಿಂದಲೂ ಮೆಟ್ರೋ ರೈಲು ಸೇವೆ ತರುವುದನ್ನು ವಿಳಂಬ ಮಾಡುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಶಾಹೀನ್ ಬಾಗ್‌ನಲ್ಲಿನ ಪ್ರತಿಭಟನಕಾರರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬಿರಿಯಾನಿ ನೀಡುತ್ತಿರುವುದನ್ನು ಕೂಡಲೇ ನಿಲ್ಲಿಸಲಿ ಎಂದು ಒತ್ತಾಯಿಸಿದರು.

70 ವಿಧಾನಸಭಾ ಕ್ಷೇತ್ರಗಳಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಫೆಬ್ರವರಿ 8ರಂದು ಮತದಾನ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಪ್ರಕಟವಾಗಲಿದೆ.

ಇನ್ನಷ್ಟು:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.