
ಸಾಂದರ್ಭಿಕ ಚಿತ್ರ
ಚಿತ್ರ ಕೃಪೆ; ಎಐ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರವಾಸದಲ್ಲಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್‌ನ ಹೈಫಾ ನಗರವನ್ನು ಒಟ್ಟೋಮನ್ ತುರ್ಕರಿಂದ ವಿಮೋಚನೆಗೊಳಿಸುವಲ್ಲಿ ಭಾರತೀಯ ಸೈನಿಕರ ಪಾತ್ರ ದೊಡ್ಡದು ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಭಾರತವು ಬ್ರಿಟಿಷರ ಅಧೀನದಲ್ಲಿದ್ದ ಸಂದರ್ಭದಲ್ಲಿ ವಿಶ್ವ ಯುದ್ಧಗಳು ನಡೆದವು. ಆ ವೇಳೆ ಇಸ್ರೇಲ್‌ನ ಹೈಫಾ ನಗರವು ಒಟ್ಟೋಮನ್ ತುರ್ಕರ ದಾಸ್ಯದಲ್ಲಿತ್ತು. ಇದೇ ಸಂದರ್ಭದಲ್ಲಿ ಭಾರತ ಕೂಡ ಮೊದಲನೇ ಮಹಾಯುದ್ದದಲ್ಲಿ ಭಾಗಿಯಾಗಿತ್ತು. 1918ರ ಸೆಪ್ಟೆಂಬರ್ 23ರಂದು ಹೈಫಾ ನಗರವನ್ನು ಒಟ್ಟೋಮನ್ ದಾಸ್ಯದಿಂದ ಮುಕ್ತಗೊಳಿಸಲು ನಡೆದ ಕದನವೇ ಹೈಫಾ ಕದನ.
ಈ ಕದನದಲ್ಲಿ ಭಾರತ ಮೂಲದ ಸೈನಿಕರು ಬಹುಮುಖ್ಯ ಪಾತ್ರ ವಹಿಸಿದ್ದರು. ಕದನದಲ್ಲಿ ದೇಶದ ಹಲವು ರಾಜ್ಯಗಳ ಯೋಧರು ಭಾಗಿಯಾಗಿದ್ದರು. ಅದರಲ್ಲಿಯೂ ನಮ್ಮ ಕರ್ನಾಟಕದ ಮೈಸೂರಿನ ಯೋಧರು ತಮ್ಮ ಶೌರ್ಯ ಹಾಗೂ ಯುದ್ಧತಂತ್ರದಿಂದ ಶತ್ರುಗಳಿಗೆ ಸಿಂಹ ಸ್ವಪ್ನವಾದರು ಎಂಬುದು ವಿಶೇಷ.
ಕದನದಲ್ಲಿ ಭಾರತೀಯ ಪಡೆಗಳು ಭಾಗಿ
ಪ್ರಮುಖವಾಗಿ ಜೋಧ್‌ಪುರ, ಮೈಸೂರು ಮತ್ತು ಹೈದರಾಬಾದ್ ಲಾನ್ಸರ್ಸ್ (ಅಶ್ವದಳ) ಗಳನ್ನೊಳಗೊಂಡ ಭಾರತೀಯ ಸೈನಿಕರು ಯುದ್ಧದಲ್ಲಿ ಭಾಗಿಯಾಗಿದ್ದರು. ಸಾಂಪ್ರದಾಯಿಕ ಯುದ್ದ ಪರಿಣಿತಿಯನ್ನು ಕರಗತ ಮಾಡಿಕೊಂಡಿದ್ದ ಸೈನಿಕರು ಆಧುನಿಕ ಮದ್ದುಗುಂಡುಗಳಿದ್ದ ಒಟ್ಟೋಮನ್ನರನ್ನು ಸಮರ್ಥವಾಗಿ ಎದುರಿಸಿದರು.
ಭಾರತೀಯ ಸೈನಿಕರು ಭರ್ಜಿ ಮತ್ತು ಕತ್ತಿಗಳಿಂದಲೇ ಹೋರಾಟ ಮಾಡಿದ್ದು ವಿಶೇಷವಾಗಿದೆ. ‘ಇಸ್ರೇಲ್‌ನ ಹೈಫಾ ನಗರವನ್ನು ಒಟ್ಟೋಮನ್ ದಾಸ್ಯದಿಂದ ಬಿಡುಗಡೆಗೊಳಿಸಿದ್ದು, ಭಾರತೀಯ ಸೈನಿಕರೇ ಹೊರತು ಬ್ರಿಟಿಷರಲ್ಲ' ಎಂದು ಹೈಫಾದ ಮೇಯರ್ ಯೋನಾ ಯಹಾವ್ಕಾ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಹೈಫಾ ಕದನದಲ್ಲಿ ಮೈಸೂರಿನ ಪಾತ್ರ
ಹೈಫಾ ಕದನದಲ್ಲಿ ಮೈಸೂರು ಸಂಸ್ಥಾನದ ಅಶ್ವದಳ ಜಗತ್ತಿನ ಮಿಲಿಟರಿ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿತ್ತು. ಕದನದಲ್ಲಿ ಕೇವಲ ಕತ್ತಿ, ಈಟಿಗಳನ್ನು ಹಿಡಿದು ಹೈಫಾ ವಿಮೋಚನೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಒಟ್ಟೋಮನ್ ಸೈನ್ಯ ಮೌಂಟ್ ಕಾರ್ಮೆಲ್ ಬೆಟ್ಟದ ಮೇಲೆ ಭಾರಿ ಪ್ರಮಾಣದ ಮಷಿನ್ ಗನ್ ಮತ್ತು ಫಿರಂಗಿಗಳೊಂದಿಗೆ ಯುದ್ಧಕ್ಕೆ ಸನ್ನದ್ಧವಾಗಿತ್ತು. ಆದರೆ ಮೈಸೂರು ಮತ್ತು ಜೋಧ್‌ಪುರ ಸೈನಿಕರ ಬಳಿ ಸುಮಾರು 10 ಅಡಿ ಉದ್ದದ ಈಟಿ, ಖಡ್ಗ ಹಾಗೂ ಯುದ್ದದಲ್ಲಿ ಪಳಗಿದ್ದ ಕುದುರೆಗಳು ಮಾತ್ರ ಇದ್ದವು.
ಮೈಸೂರಿನ ಪಡೆಗಳು ಶತ್ರುಗಳ ಕಣ್ಣುತಪ್ಪಿಸಿ ಬೆಟ್ಟದ ಕಡಿದಾದ ಪ್ರದೇಶಗಳಿಗೂ ತಮ್ಮ ಕುದುರೆಗಳ ಮೂಲ ಏರಿದರು. ಅಲ್ಲಿದ್ದ ಮಷಿನ್ ಗನ್ ಗುಂಡುಗಳ ಸುರಿಮಳೆಯ ನಡುವೆಯೂ ಎದೆಯೊಡ್ಡಿ ಮುನ್ನುಗಿದ ಸೈನಿಕರು, ಶತ್ರುಗಳು ಚೇತರಿಸಿಕೊಳ್ಳುವ ಮೊದಲೇ ಈಟಿಗಳಿಂದ ಅವರನ್ನು ಕೊಂದಿದ್ದರು. ವರದಿ ಪ್ರಕಾರ ಕೇವಲ 8 ಜನ ಭಾರತೀಯ ಸೈನಿಕರು ಮೃತಪಟ್ಟರು. ಇದು ಭಾರತೀಯರ ಯುದ್ಧ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ತಂತ್ರಕ್ಕೆ ಪ್ರತಿತಂತ್ರ
ಜೋಧಪುರದವರು ಕಿಶೋನ್ ನದಿ ಮತ್ತು ಮೌಂಟ್ ಕಾರ್ಮೆಲ್ ಸುತ್ತುವರೆದರೆ, ಮೈಸೂರಿನವರು ಪೂರ್ವ ಮತ್ತು ಉತ್ತರ ದಿಕ್ಕಿನಿಂದ ಪಟ್ಟಣವನ್ನು ಮುತ್ತಿಗೆ ಹಾಕಿದ್ದರು. ಹೈದರಾಬಾದ್‌ನವರು ಶಸ್ತ್ರಾಸ್ತ್ರಗಳ ಸಾಗಣೆಯಲ್ಲಿ ನಿರತರಾಗಿದ್ದರು. ಈ ಕದನದಲ್ಲಿ ಮೈಸೂರು ಲ್ಯಾನ್ಸರ್‌ನ ಸುಮಾರು 250ರಿಂದ 300 ಸೈನಿಕರು ಆಧುನಿಕ ಯುದ್ಧೋಪಕರಣಗಳನ್ನು ಬಳಸಿ ಒಟ್ಟೋಮನ್ ಸಾಮ್ರಾಜ್ಯದ ವಿರುದ್ಧ ಜಯ ಗಳಿಸಿದ್ದರು. ಇದು ಇಸ್ರೇಲ್ ರಾಷ್ಟ್ರದ ನಿರ್ಮಾಣಕ್ಕೂ ತಳಪಾಯ ಹಾಕಿತ್ತು.
ಹೈಫಾ ದಿನದ ಆಚರಣೆ
ಪ್ರತಿ ವರ್ಷ ಸೆಪ್ಟೆಂಬರ್ 23ರಂದು ಭಾರತೀಯ ಸೇನೆಯು 'ಹೈಫಾ ದಿನ'ವನ್ನು ಆಚರಿಸುತ್ತದೆ. ಇಸ್ರೇಲ್ ದೇಶವು ಇಂದಿಗೂ ತನ್ನ ಪಠ್ಯಪುಸ್ತಕಗಳಲ್ಲಿ ಭಾರತೀಯ ಸೈನಿಕರ ಈ ಶೌರ್ಯದ ಕಥೆಯನ್ನು ಇಟ್ಟಿದೆ. ಈ ಘಟನೆಯ ಸ್ಮರಣೆಯಾಗಿ ದೇಶದಲ್ಲಿ ಸ್ಮಾರಕಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.