ಕೊಲ್ಕತ್ತ: ಪ್ರತಿಭಟನಾ ನಿರತ ಶಾಲಾ ಶಿಕ್ಷಕರ ವಿರುದ್ಧ ಟಿಎಂಸಿ ಸರ್ಕಾರ ನಡೆಸಿದ ಲಾಠಿ ಚಾರ್ಜ್ 'ಕ್ರೌರ್ಯದ ಪರಮಾವಧಿ'ಯಾಗಿತ್ತು ಎಂದು ಬಿಜೆಪಿ ಟೀಕಿಸಿದೆ.
ಗುರುವಾರ, ರಾಜ್ಯ ಶಿಕ್ಷಣ ಇಲಾಖೆಯ ಪ್ರಧಾನ ಕಚೇರಿ ಬಳಿ ಪ್ರತಿಭಟನಾ ನಿರತ ಶಾಲಾ ಶಿಕ್ಷಕರ ಮೇಲೆ, ಗುರುವಾರ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು.
2016ರಲ್ಲಿ ಶಾಲಾ ಶಿಕ್ಷಕರ ನೇಮಕಾತಿಗಾಗಿ ಜರುಗುವ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದವರ ನೇಮಕಾತಿಯನ್ನು ಕೋರ್ಟ್ ತಡೆ ಹಿಡಿದ ಕಾರಣ, ನಿರುದ್ಯೋಗಿಗಳಾಗಿರುವ ಶಾಲಾ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದರು.
ಪ್ರತಿಭಟನಾ ನಿರತ ಶಿಕ್ಷಕರ ಮೇಲಿನ ದಾಳಿಯನ್ನು, ಪಶ್ಚಿಮ ಬಂಗಾಳ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಶಾಸಕ ಸುವೆಂದು ಅಧಿಕಾರಿ ಖಂಡಿಸಿದ್ದಾರೆ.
ಇದು ಪಶ್ಚಿಮ ಬಂಗಾಳದಲ್ಲಿರುವ ಸರ್ವಾಧಿಕಾರಿ ಧೋರಣೆ ಹಾಗೂ ಇಲ್ಲಿನ ಸರ್ಕಾರವು ಭ್ರಷ್ಟರನ್ನು ರಕ್ಷಿಸುತ್ತಿರುವುದನ್ನು ತೋರಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಚಿನ್ನದ ಪದಕ ಪಡೆದಿದ್ದವರು ಕೂಡ ನಿನ್ನೆಯ ಪ್ರತಿಭಟನೆಯ ವೇಳೆ ಕಣ್ಣೀರು ಹಾಕುತ್ತಿದ್ದರು. ಇದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅವರ ಸಚಿವರೇ ನೇರ ಹೊಣೆಯಾಗಿದ್ದಾರೆ ಎಂದು ಆರೋಪಿಸಿದರು.
ಶಿಕ್ಷಣ ಇಲಾಖೆಯ ಪ್ರಧಾನ ಕಚೇರಿಯ ಒಳಗಡೆ, ಪ್ರತಿಭಟನಾಕಾರರು ನುಸುಳಲು ಪ್ರಯತ್ನಪಟ್ಟಿದ್ದರಿಂದ, ಅದನ್ನು ತಪ್ಪಿಸಲು ಲಾಠಿ ಚಾರ್ಜ್ ಮಾಡಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ 19 ಜನ ಪೊಲೀಸ್ ಸೇರಿದಂತೆ ಪ್ರತಿಭಟನಾ ನಿರತ ಹಲವರಿಗೆ ಗಂಭೀರ ಗಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.