ಕೋಲ್ಕತ್ತ: ರಾಜ್ಯಕ್ಕೆ ಇತ್ತೀಚೆಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಕ್ಕಾಗಿ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ಎದುರಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅತಿಥಿಗಳನ್ನು ಮಾತ್ರವಲ್ಲದೇ "ಶತ್ರುಗಳನ್ನೂ" ಸ್ವಾಗತಿಸುವುದು ಬಂಗಾಳದ ಸಂಸ್ಕೃತಿ ಎಂದು ಹೇಳಿದ್ದಾರೆ.
ಹೆಸರು ಹೇಳದೆಯೇ 'ಶತ್ರು' ಎಂದು ಅವರು ನೀಡಿದ ಹೇಳಿಕೆ ಈಗ ಚರ್ಚೆಗೆ ಗ್ರಾಸವೊದಗಿಸಿದೆ. ಪ್ರಧಾನಿ ಮೋದಿಯನ್ನೇ ಅವರು ಶತ್ರು ಎಂಬುದಾಗಿ ಉಲ್ಲೇಖಿಸಿದರೇ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬಿಜೆಪಿ ವಿರುದ್ಧ ಕೆಂಡ ಕಾರಿದ ಮಮತಾ ಬ್ಯಾನರ್ಜಿ, ಕಾನೂನುಬದ್ಧವಾಗಿ ಪೌರತ್ವ ಹೊಂದಿರುವವರ ಪೌರತ್ವವನ್ನೇ ಕಸಿದುಕೊಂಡು, ಕೇಸರಿ ಪಕ್ಷಕ್ಕೆ ಹಣಕಾಸು ನೆರವು ಒದಗಿಸುವ ವಿದೇಶೀಯರಿಗೆ ನೀಡುವ ತಂತ್ರಗಾರಿಕೆ ಇದು ಎಂದು ಹೇಳಿದರು.
ಈ ಕಾಯ್ದೆಯು ಯಾರಿಂದಲೂ ಪೌರತ್ವ ಕಸಿದುಕೊಳ್ಳುವ ಉದ್ದೇಶ ಹೊಂದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮಾತ್ರವಲ್ಲದೆ ಕೇಂದ್ರ ಸರ್ಕಾರದ ಹಲವಾರು ಸಚಿವರು ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದರು.
ಉತ್ತರ ಪ್ರದೇಶದಲ್ಲಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ, ಗುವಾಹಟಿ ಹಾಗೂ ದೆಹಲಿಯ ಜೆಎನ್‌ಯುನಲ್ಲಿ ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಲು ತಮ್ಮ ಪಕ್ಷದ ನಿಯೋಗಕ್ಕೆ ಅವಕಾಶ ನೀಡದ ಬಿಜೆಪಿ ವಿರುದ್ಧ ಕಿಡಿ ಕಾರಿದ ಮಮತಾ, ತಾನು "ಶತ್ರುಗಳಿಗೂ" ಸೌಜನ್ಯ ತೋರಿಸುತ್ತೇನೆ ಎಂದು ಕುಟುಕಿದರು.
"ರಾಜ್ಯಕ್ಕೆ ಆಗಮಿಸುವವರಿಗೆ ಸೌಜನ್ಯ ವ್ಯಕ್ತಪಡಿಸುವುದು ಬಂಗಾಳಿ ಸಂಸ್ಕೃತಿ. ನಮ್ಮ ಅತಿಥಿಗಳನ್ನು ಹೇಗೆ ಗೌರವಿಸಬೇಕೆಂಬುದು ನಮಗೆ ಗೊತ್ತಿದೆ, ನಾವು ನಮ್ಮ ಶತ್ರುಗಳಿಗೂ ಸೌಜನ್ಯ ಪ್ರಕಟಿಸುತ್ತೇವೆ. ಆದರೆ ನೀವು (ಬಿಜೆಪಿ) ನಮ್ಮ ಪಕ್ಷದ ಮುಖಂಡರು ಜಮ್ಮು, ಉತ್ತರಪ್ರದೇಶ, ಗುವಾಹಟಿ ಮತ್ತು ಜೆಎನ್‌ಯು ಪ್ರವೇಶಿಸದಂತೆ ತಡೆದಿರಿ" ಎಂದು ನರೇಂದ್ರ ಮೋದಿಯವರು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿರುವುದನ್ನು ಪರೋಕ್ಷವಾಗಿ ಉಲ್ಲೇಖಿಸಿ ನುಡಿದರು.
ಪ್ರಧಾನಿ ರಾಜ್ಯಕ್ಕಾಗಮಿಸಿದಾಗ ಅವರು ರಾಜಭವನದಲ್ಲಿ ಮೋದಿಯವರನ್ನು ಭೇಟಿಯಾಗಿದ್ದರಲ್ಲದೆ, ಒಂದೇ ವೇದಿಕೆಯಲ್ಲಿಯೂ ಕಾಣಿಸಿಕೊಂಡಿದ್ದರು. ಮೋದಿಯನ್ನು ವಿರೋಧಿಸುತ್ತಲೇ ಬಂದಿರುವ ಮಮತಾ ಅವರ ಈ ನಡೆಯನ್ನು ವಿರೋಧ ಪಕ್ಷಗಳು ಟೀಕಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.