ಕೋಲ್ಕತ್ತ: ಈಶಾನ್ಯ ರಾಜ್ಯಗಳಲ್ಲಿ ಶಾಂತಿ–ಸೌಹಾರ್ದತೆಯಿಂದ ನೆಲೆಸಿರುವ ಬಂಗಾಳಿ ಭಾಷಿಕರಿಗೆ ಅಸ್ಸಾಂನ ಬಿಜೆಪಿ ಸರ್ಕಾರವು ಬೆದರಿಕೆ ಹಾಕುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಆರೋಪಿಸಿದ್ದಾರೆ.
ಬಂಗಾಳಿ ಭಾಷಿಕ ವಲಸಿಗರನ್ನು ಕೇಂದ್ರ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ‘ಅಕ್ರಮ ಬಾಂಗ್ಲಾದೇಶಿ ವಲಸಿಗ’ಅಥವಾ ‘ರೋಹಿಂಗ್ಯಾ’ಗಳ ರೀತಿ ಕಾಣಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಬಂಗಾಳಿ ಭಾಷೆಯು ದೇಶದಲ್ಲಿ ಎರಡನೇ ಅತಿದೊಡ್ಡ ಮಾತನಾಡುವ ಭಾಷೆಯಾಗಿದೆ. ಅಸ್ಸಾಂನಲ್ಲೂ ಎರಡನೇ ಅತಿದೊಡ್ಡ ಮಾತನಾಡುವ ಭಾಷೆ ಬಂಗಾಳಿಯೇ ಆಗಿದೆ. ಬಂಗಾಳಿಗಳು ಎಲ್ಲಾ ಭಾಷೆಯನ್ನು ಕೂಡ ಗೌರವಿಸುತ್ತಾರೆ. ಆದರೂ, ಮಾತೃಭಾಷೆಯನ್ನು ಎತ್ತಿಹಿಡಿಯುವುದಕ್ಕೆ ಕಿರುಕುಳ ನೀಡುವುದು ಅಸಂವಿಧಾನಿಕವಾಗಿದೆ ಎಂದಿದ್ದಾರೆ.
ಬಿಜೆಪಿಯ ವಿಭಜನೆ ನೀತಿಯು ಅಸ್ಸಾಂನಲ್ಲಿ ‘ಎಲ್ಲೆ ಮೀರಿದೆ’. ಇದರ ವಿರುದ್ಧ ಅಸ್ಸಾಂನ ಜನರು ತಿರುಗಿ ನಿಲ್ಲಲಿದ್ದಾರೆ. ಅವರ ಮಾತೃಭಾಷೆ ಮತ್ತು ಗುರುತಿಗಾಗಿ ಹೋರಾಡುವ ಪ್ರತಿಯೊಬ್ಬ ನಾಗರಿಕರ ಪರ ನಾನಿದ್ದೇನೆ. ಅದು ಅವರ ಸಂವಿಧಾನಿಕ ಹಕ್ಕು ಎಂದು ‘ಎಕ್ಸ್’ನಲ್ಲಿ ಮಮತಾ ಬ್ಯಾನರ್ಜಿ ಅವರು ಪೋಸ್ಟ್ ಮಾಡಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ‘ಪಶ್ಚಿಮ ಬಂಗಾಳ ಮುಖ್ಯಮಂತ್ರಿಗೆ ಕೇವಲ ಬಂಗಾಳಿ ಮುಸ್ಲಿಮರ ಚಿಂತೆಯಿದೆ. ಅವರಿಗಾಗಿ ಮಮತಾ ಬ್ಯಾನರ್ಜಿ ಅವರು ಅಸ್ಸಾಂಗೆ ಬಂದರೆ ಇಲ್ಲಿನ ಜನ ಹಾಗೂ ಬಂಗಾಳಿ ಹಿಂದೂಗಳು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದಿದ್ದಾರೆ.
ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಬಂಗಾಳಿ ಭಾಷಿಕರ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕೋಲ್ಕತ್ತದಲ್ಲಿ ಬುಧವಾರವಷ್ಟೇ ಮಮತಾ ಬ್ಯಾನರ್ಜಿ ಅವರು ಪ್ರತಿಭಟನೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.