ADVERTISEMENT

ಪಂಜಾಬ್ ಸಿಎಂ ಆಗಿ ಭಗವಂತ್ ಮಾನ್ ಪ್ರಮಾಣವಚನ ಸ್ವೀಕಾರ: ಹೇಳಿದ್ದೇನು ಗೊತ್ತಾ?

ಪಿಟಿಐ
Published 16 ಮಾರ್ಚ್ 2022, 11:48 IST
Last Updated 16 ಮಾರ್ಚ್ 2022, 11:48 IST
ಭಗವಂತ್ ಮಾನ್
ಭಗವಂತ್ ಮಾನ್   

ಶಹೀದ್ ಭಗತ್ ಸಿಂಗ್ ನಗರ್: ಸ್ವಾತಂತ್ರ್ಯ ಹೋರಾಟಗಾರಭಗತ್ ಸಿಂಗ್ ಗ್ರಾಮವಾದ ಖಾಟ್ಕರ್ ಕಲಾನ್‌ನಲ್ಲಿ ಭಗವಂತ ಮಾನ್ ಅವರು ಇಂದು (ಮಾ.16) ಪಂಜಾಬ್‌ನ 17ನೇ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಪ್ರತಿಜ್ಞಾವಿಧಿ ಬೋಧಿಸಿದರು.

ಈ ವೇಳೆ ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎಎಪಿ ನಾಯಕರಾದ ಮನೀಷ್ ಸಿಸೋಡಿಯಾ, ರಾಘವ ಚೆಡ್ಡಾ, ಸತ್ಯೇಂದ್ರ ಜೈನ್, ಭಗವಂತ್ ಮಾನ್ ತಾಯಿ ಹಾಗೂ ಕುಟುಂಬದವರು ಸೇರಿದಂತೆ ಪಂಜಾಬ್‌ನ ಅನೇಕ ನಾಯಕರು ಉಪಸ್ಥಿತರಿದ್ದರು.

ಪ್ರಮಾಣವಚನ ಸ್ವೀಕರಿಸಿ ಮಾತನಾಡಿದ ಭಗವಂತ್ ಮಾನ್ ಅವರು, ‘ಅಧಿಕಾರ ಸ್ವೀಕರಿಸಿದ ಈ ಕ್ಷಣದಿಂದ ಒಂದೇ ಒಂದು ಕ್ಷಣವನ್ನು ವ್ಯರ್ಥವಾಗಿ ಕಳೆಯುವುದಿಲ್ಲ. ಪಂಜಾಬ್ ಜನತೆಗೆ ಹಗಹಲಿರುಳು ಕೆಲಸ ಮಾಡುತ್ತೇನೆ’ ಎಂದು ಶಪಥ ಮಾಡಿದರು.

ADVERTISEMENT

‘ದೆಹಲಿಯಲ್ಲಿ ಎಎಪಿ ಸರ್ಕಾರ ಮಾಡಿರುವಂತೆ ಸರ್ಕಾರಿ ಶಾಲೆ, ಆಸ್ಪತ್ರೆಗಳ ವಿಷಯದಲ್ಲಿ ಪಂಜಾಬ್‌ನಲ್ಲೂ ಅದೇ ರೀತಿ ಬದಲಾವಣೆ ತರಲಾಗುವುದು. ದೇಶದ ಜನ ಪಂಜಾಬ್ ಕಡೆಗೆ ತಿರುಗಿ ನೋಡುವಂತೆ ಮಾಡುವುದು ನನ್ನ ಗುರಿ. ಪಂಜಾಬಿ ಜನ ಬೇರೆ ಕಡೆ ವಲಸೆ ಹೋಗದಂತೆ ತಡೆಯುತ್ತೇನೆ’ ಎಂದರು.

‘ಕಳೆದ 70 ವರ್ಷಗಳಲ್ಲಿ ಅಧಿಕಾರ ನಡೆಸಿದ್ದವರು ಮಾಡದ್ದನ್ನು ನಾವು ಮಾಡಿ ತೋರಿಸುತ್ತೇವೆ’ ಎಂದು ಭಗವಂತ್ ಮಾನ್ ವಿಶ್ವಾಸಯುತವಾಗಿ ನುಡಿದರು.

‘ಭಗತ್ ಸಿಂಗ್ ಅವರು ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದರು. ನಾನು ಆ ಸ್ವಾತಂತ್ರ್ಯವನ್ನು ಜನಸಾಮಾನ್ಯರಿಗೆ ತಲುಪಿಸಲು ಹೋರಾಡುತ್ತೇನೆ’ ಎಂದು ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಶಪಥ ಮಾಡಿದರು.

ಅಲ್ಲದೇ ‘ಎಎಪಿ ಕಾರ್ಯಕರ್ತರು ನಮಗೆ ವೋಟ್ ಹಾಕಿದವರು ಹಾಕಿಲ್ಲದವರನ್ನು ಸಮಾನವಾಗಿ ಕಂಡು ಸ್ನೇಹಮಯ ವಾತಾವರಣದಿಂದ ಕೆಲಸ ಮಾಡೋಣ’ ಎಂದು ಕರೆ ಕೊಟ್ಟರು.

117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿಯ 92 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.