ADVERTISEMENT

ಕೋವ್ಯಾಕ್ಸಿನ್: 2ರಿಂದ 18 ವರ್ಷ ವಯೋಮಾನದವರ ಮೇಲೆ ಕ್ಲಿನಿಕಲ್ ಟ್ರಯಲ್‌ಗೆ ಶಿಫಾರಸು

ಕೋವಿಡ್‌ ಲಸಿಕೆ

ಪಿಟಿಐ
Published 12 ಮೇ 2021, 5:20 IST
Last Updated 12 ಮೇ 2021, 5:20 IST
ಕೊವ್ಯಾಕ್ಸಿನ್‌ ಲಸಿಕೆ–ಸಾಂದರ್ಭಿಕ ಚಿತ್ರ
ಕೊವ್ಯಾಕ್ಸಿನ್‌ ಲಸಿಕೆ–ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತ್‌ ಬಯೋಟೆಕ್‌ನ 'ಕೋವ್ಯಾಕ್ಸಿನ್‌' ಕೋವಿಡ್‌–19 ಲಸಿಕೆಯನ್ನು ಎರಡು ವರ್ಷ ವಯಸ್ಸಿನಿಂದ 18 ವರ್ಷ ವಯೋಮಾನದವರಲ್ಲಿ ಕ್ಲಿನಿಕಲ್‌ ಟ್ರಯಲ್‌ ನಡೆಸಲು ತಜ್ಞರ ಸಮಿತಿಯು ಮಂಗಳವಾರ ಶಿಫಾರಸು ಮಾಡಿದೆ.

ದೆಹಲಿಯ ಏಮ್ಸ್‌ , ಪಟನಾದ ಏಮ್ಸ್‌ ಹಾಗೂ ನಾಗ್ಪುರದ ಮೆಡಿಟ್ರಿನಾ ಇನ್‌ಸ್ಟಿಟ್ಯೂಟ್‌ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್‌ ಟ್ರಯಲ್‌ ನಡೆಸಲಾಗುತ್ತದೆ.

'ಮೂರನೇ ಹಂತದ ಪ್ರಯೋಗಕ್ಕೂ ಮುನ್ನ, ಎರಡನೇ ಹಂತದ ಕ್ಲಿನಿಕಲ್‌ ಟ್ರಯಲ್‌ನ ಮಧ್ಯಂತರ ಅಧ್ಯಯನ ವರದಿ (ಸುರಕ್ಷತೆಗೆ ಸಂಬಂಧಿಸಿದ ದತ್ತಾಂಶ) ಜೊತೆಗೆ ಡಿಎಸ್‌ಎಂಬಿ ಶಿಫಾರಸುಗಳನ್ನು ಸಿಡಿಎಸ್‌ಸಿಒಗೆ ಸಲ್ಲಿಸಬೇಕು' ಎಂದು ಕೇಂದ್ರ ಔಷಧ ಮತ್ತು ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ಕೋವಿಡ್‌–19 ತಜ್ಞರ ಸಮಿತಿಯು ಶಿಫಾರಸು ಮಾಡಿರುವುದಾಗಿ ವರದಿಯಾಗಿದೆ. ಎರಡು ವರ್ಷ ವಯಸ್ಸಿನ ಮಕ್ಕಳಿಂದ 18 ವರ್ಷದ ವಯೋಮಾನದವರ ಮೇಲೆ ಕೋವ್ಯಾಕ್ಸಿನ್‌ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ ನಡೆಸಲು ಭಾರತ್‌ ಬಯೋಟೆಕ್‌ ಮನವಿ ಸಲ್ಲಿಸಿತ್ತು.

ADVERTISEMENT

ಫೆಬ್ರುವರಿ 24ರಂದು ಈ ಪ್ರಸ್ತಾವನೆಯ ಬಗ್ಗೆ ಚರ್ಚಿಸಲಾಗಿತ್ತು ಹಾಗೂ ಕ್ಲಿನಿಕಲ್‌ ಟ್ರಯಲ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರಿಷ್ಕೃತ ವಿವರ ಸಲ್ಲಿಸುವಂತೆ ತಿಳಿಸಲಾಗಿತ್ತು. ಐಸಿಎಂಆರ್‌ ಮತ್ತು ಭಾರತ್‌ ಬಯೋಟೆಕ್‌ ಸಹಯೋಗದಲ್ಲಿ ಕೋವ್ಯಾಕ್ಸಿನ್‌ ಲಸಿಕೆ ಅಭಿವೃದ್ಧಿ ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.