ADVERTISEMENT

ಭಾರತ್ ಜೋಡೊ ಯಾತ್ರೆಗೆ 100ನೇ ದಿನ: ರಾಹುಲ್ ಜೊತೆ ಹಿಮಾಚಲ ಪ್ರದೇಶ ಸಿಎಂ ಹೆಜ್ಜೆ

ಪಿಟಿಐ
Published 16 ಡಿಸೆಂಬರ್ 2022, 7:47 IST
Last Updated 16 ಡಿಸೆಂಬರ್ 2022, 7:47 IST
ಭಾರತ್ ಜೋಡೊ ಯಾತ್ರೆಯ ನೂರನೇ ದಿನ ರಾಹುಲ್‌ ಗಾಂಧಿ ಜೊತೆ ಹೆಜ್ಜೆ ಹಾಕಿದ ಕಾಂಗ್ರೆಸ್ ನಾಯಕರು (ಪಿಟಿಐ ಚಿತ್ರ)
ಭಾರತ್ ಜೋಡೊ ಯಾತ್ರೆಯ ನೂರನೇ ದಿನ ರಾಹುಲ್‌ ಗಾಂಧಿ ಜೊತೆ ಹೆಜ್ಜೆ ಹಾಕಿದ ಕಾಂಗ್ರೆಸ್ ನಾಯಕರು (ಪಿಟಿಐ ಚಿತ್ರ)   

ದೌಸಾ (ರಾಜಸ್ಥಾನ):ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ನಡೆಸುತ್ತಿರುವ 'ಭಾರತ್‌ ಜೋಡೊ ಯಾತ್ರೆ'ಯು ಇಂದು (ಶುಕ್ರವಾರ) ನೂರನೇ ದಿನಕ್ಕೆ ಕಾಲಿಟ್ಟಿದೆ. ಯಾತ್ರೆಯು ಸದ್ಯ ರಾಜಸ್ಥಾನದಲ್ಲಿ ಸಾಗುತ್ತಿದ್ದು, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖುಅವರು ರಾಹುಲ್‌ ಜೊತೆಗೆ ಹೆಜ್ಜೆ ಹಾಕಿದ್ದಾರೆ.

ಸುಖು ಅವರಷ್ಟೇ ಅಲ್ಲದೆ, ಅಲ್ಲಿನ (ಹಿಮಾಚಲ ಪ್ರದೇಶ) ಉಪಮುಖ್ಯಮಂತ್ರಿ ಮುಕೇಶ್‌ ಅಗ್ನಿಹೋತ್ರಿ, ಕಾಂಗ್ರೆಸ್‌ ರಾಜ್ಯ ಘಟಕದ (ಎಚ್‌ಪಿಸಿಸಿ) ಅಧ್ಯಕ್ಷೆ ಪ್ರತಿಭಾ ಸಿಂಗ್‌, ಕಣಿವೆ ರಾಜ್ಯದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಶಾಸಕರು, ಎಐಸಿಸಿ ರಾಜ್ಯ ಉಸ್ತುವಾರಿ ರಾಜೀವ್ ಶುಕ್ಲಾ ಅವರೂ ಭಾಗವಹಿಸಿದ್ದಾರೆ. ಇವರೆಲ್ಲ ಬೆಳಗ್ಗೆ ಚಹಾ ವಿರಾಮದ ವೇಳೆ ಯಾತ್ರೆಗೆ ಕೂಡಿಕೊಂಡಿದ್ದಾರೆ.

ರಾಹುಲ್‌ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಮತ್ತು ಪಕ್ಷದ ಹಿರಿಯ ನಾಯಕರೊಂದಿಗೆ ಇಲ್ಲಿನ ಮೀನಾ ಹೈಕೋರ್ಟ್‌ ಬಳಿ ಮುಂಜಾನೆ ನೂರನೇ ದಿನದ ಯಾತ್ರೆ ಆರಂಭಿಸಿದರು.

ADVERTISEMENT

'ಪ್ರಯಾಣದುದ್ದಕ್ಕೂ ದೇಶದ ಸಾಮಾನ್ಯ ಜನರ ಸಮಸ್ಯೆಗಳತ್ತ ಗಮನ ಸೆಳೆದದ್ದು ಭಾರತ್‌ ಜೋಡೊ ಯಾತ್ರೆಯ ಅತಿದೊಡ್ಡ ಯಶಸ್ಸು.ರಾಹುಲ್‌ ಗಾಂಧಿ ಅವರ ಹೆಸರು ಕೆಡಿಸಲು ಬಿಜೆಪಿಯವರು ಮಾಡಿದ ಪ್ರಯತ್ನಗಳನ್ನೂ ನಾವು ನಾಶ ಮಾಡಿದ್ದೇವೆ' ಎಂದು ವೇಣುಗೋಪಾಲ್‌ ಅವರು ಹೇಳಿದ್ದಾರೆ.

ಮುಂದುವರಿದು, ಪಕ್ಷವುಜನವರಿ 26ರಿಂದ ಆರಂಭಿಸುವ ಫಾಲೋ ಅಪ್‌ ಅಭಿಯಾನದ ಮೂಲಕ ಭಾರತ್‌ ಜೋಡೊ ಯಾತ್ರೆಯ ಉದ್ದೇಶ ಹಾಗೂ ಸಂದೇಶವನ್ನು ದೇಶದಾದ್ಯಂತ ಪ್ರಸಾರ ಮಾಡಲಾಗುವುದು ಎಂದೂ ತಿಳಿಸಿದ್ದಾರೆ.

ಸೆಪ್ಟೆಂಬರ್‌ 7ರಂದು ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಮಧ್ಯ ಪ್ರದೇಶ ಮೂಲಕ ಇದೀಗ ರಾಜಸ್ಥಾನದಲ್ಲಿ ನಡೆಯುತ್ತಿದೆ. ಈವರೆಗೆ ಸುಮಾರು 2,800 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಿದೆ.ಡಿಸೆಂಬರ್‌ 24ರಂದು ದೆಹಲಿ ತಲುಪಲಿದ್ದು, ಎಂಟು ದಿನಗಳ ವಿರಾಮದ ಬಳಿಕ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌ ಹಾಗೂ ಅಂತಿಮವಾಗಿ ಜಮ್ಮು ಮತ್ತು ಕಾಶ್ಮೀರದತ್ತ ಹೊರಡಲಿದೆ.

ಯಾತ್ರೆಯಲ್ಲಿ ಕಾಂಗ್ರೆಸ್‌ ನಾಯಕರಷ್ಟೇ ಅಲ್ಲದೆ, ಎಲ್ಲ ವರ್ಗದ ಜನರು, ಲೇಖಕರು, ನಿವೃತ್ತ ಯೋಧರು, ಬೇರೆ ಬೇರೆ ಪಕ್ಷಗಳ ಮುಖಂಡರು, ಕ್ರೀಡಾಪಟುಗಳು, ನಟ–ನಟಿಯರೂ ವಿವಿಧ ಕಡೆಗಳಲ್ಲಿ ರಾಹುಲ್‌ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ.

ಯಾತ್ರೆಯು ಮೂರು ತಿಂಗಳ ಅವಧಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಆರೋಪ–ಪ್ರತ್ಯಾರೋಪಗಳಿಗೂ ವೇದಿಕೆಯಾಗಿದೆ. ರಾಹುಲ್‌ ಅವರು ಧರಿಸಿದ್ದ ಬರ್ಬೆರಿ ಟಿ–ಶರ್ಟ್‌ ಮತ್ತು ಅವರ ನೀಳ ಗಡ್ಡವು ಆರೋಪ ಹಾಗೂ ಅಣಕಗಳಿಗೂ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.