ADVERTISEMENT

ಮತಗಳನ್ನು ಖರೀದಿಸಿದ ನಿತೀಶ್‌ಗಿಂತ ಭಿನ್ನವಾಗಿ ರಾಜ್ಯವನ್ನು ಅರಿಯಲು ವಿಫಲನಾದೆ: PK

ಅಭಯ್ ಕುಮಾರ್
Published 19 ನವೆಂಬರ್ 2025, 4:24 IST
Last Updated 19 ನವೆಂಬರ್ 2025, 4:24 IST
<div class="paragraphs"><p> ಪ್ರಶಾಂತ್‌ ಕಿಶೋರ್‌</p></div>

ಪ್ರಶಾಂತ್‌ ಕಿಶೋರ್‌

   

ಸಂಗ್ರಹ ಚಿತ್ರ – ಪಿಟಿಐ

ಪಟ್ನಾ: ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಭಾರಿ ಸೋಲು ಕಂಡಿರುವುದಕ್ಕೆ ಚುನಾವಣಾ ತಂತ್ರಜ್ಞ, ಜನ ಸುರಾಜ್‌ ಪಕ್ಷದ ಸಂಸ್ಥಾಪಕ ಪ್ರಶಾಂತ್‌ ಕಿಶೋರ್‌ (ಪಿಕೆ) ಅವರು ಬಿಹಾರದ ಜನರಲ್ಲಿ ಕ್ಷಮೆಯಾಚಿಸಿದ್ದಾರೆ. ಹಾಗೆಯೇ, ತಾವು ಸಕ್ರಿಯ ರಾಜಕೀಯರಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

'ರಾಜ್ಯದ ಜನರನ್ನು ಜಾತಿ, ಧರ್ಮಗಳ ಆಧಾರದ ಮೇಲೆ ವಿಭಜಿಸಿದ ಹಾಗೂ ಸಾರ್ವಜನಿಕರ ಹಣದಿಂದ ಮತಗಳನ್ನು ಖರೀದಿಸಿದ ನಿತೀಶ್ ಕುಮಾರ್‌ ಮತ್ತು ಬಿಜೆಪಿಯ ಸಾಮ್ರಾಟ್‌ ಚೌಧರಿ ಅವರಂತೆ ಬಿಹಾರವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ವಿಫಲನಾದೆ' ಎಂದು ಹೇಳಿದ್ದಾರೆ.

'ನಮಗೆ ಮತಗಳು ಸಿಗಲಿಲ್ಲ ಎಂಬುದು ನಿಜ. ಆದರೆ, ನಾವು ಮತ ಗಳಿಕೆಗಾಗಿ ಅಕ್ರಮ ನಡೆಸಿಲ್ಲ ಮತ್ತು ವಿಭಜಕ ರಾಜಕೀಯದಲ್ಲಿ ತೊಡಗಿಕೊಳ್ಳಲಿಲ್ಲ' ಎಂದು ಪ್ರತಿಪಾದಿಸಿದ್ದಾರೆ.

ಮತದಾನದ ಮುನ್ನಾದಿನ ರಾಜ್ಯದ 1.5 ಕೋಟಿ ಮಹಿಳೆಯರ ಖಾತೆಗೆ ತಲಾ ₹ 10,000 ವಿತರಿಸಿದ ಹಾಗೂ ಮಹಿಳೆಯರು ಸ್ವ–ಉದ್ಯೋಗದಲ್ಲಿ ತೊಡಗಲು ₹ 2 ಲಕ್ಷದ ವರೆಗೆ ಹೆಚ್ಚುವರಿ ನೆರವಿನ ಭರವಸೆ ನೀಡಿರುವ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ಘೋಷಣೆಯಂತೆ 1.5 ಕೋಟಿ ಮಹಿಳೆಯರಿಗೆ ತಲಾ ₹ 10,000 ವಿತರಿಸದಿದ್ದರೆ, ನಿತೀಶ್‌ ಕುಮಾರ್‌ ಅವರು 25ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತಿರಲಿಲ್ಲ' ಎಂದು ಹೇಳಿದ್ದಾರೆ.

'ನಿತೀಶ್‌ ಅವರ ಪಕ್ಷ (ಜೆಡಿಯು) 25ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದರೆ ನಿವೃತ್ತಿ ಘೋಷಿಸುವುದಾಗಿ ನೀಡಿದ್ದ ಹೇಳಿಕೆಯಂತೆ ಪಿಕೆ ರಾಜಕೀಯ ತ್ಯಜಿಸಲಿದ್ದಾರೆ' ಎಂಬ ಉಹಾಪೋಹಗಳನ್ನು ಜನ ಸುರಾಜ್‌ ಪಕ್ಷದ ಸಂಸ್ಥಾಪಕ ತಳ್ಳಿಹಾಕಿದ್ದಾರೆ.

ಪಟ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, 'ರಾಜೀನಾಮೆ ಸಲ್ಲಿಸಲು ನಾನು ಯಾವ ಪದವಿಯನ್ನು ಹೊಂದಿದ್ದೇನೆ' ಎಂದು ಕೇಳಿರುವ ಪ್ರಶಾಂತ್‌, ಪಶ್ಚಾತ್ತಾಪ ರೂಪದಲ್ಲಿ ಚಂಪಾರಣ್‌ನಲ್ಲಿ ನವೆಂಬರ್‌ 20ರಂದು ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದಾರೆ.

'ನಾವು ಏನೆಲ್ಲ ತಪ್ಪುಗಳನ್ನು ಮಾಡಿದ್ದೇವೆ ಎಂಬುದನ್ನು ವಿಶ್ಲೇಷಿಸಿ, ಸರಿಪಡಿಸಿಕೊಳ್ಳುತ್ತೇವೆ. ಉದ್ಯೋಗ ಹಾಗೂ ವಲಸೆ ವಿಚಾರವಾಗಿ ಧ್ವನಿ ಎತ್ತುವ ಮೂಲಕ ಉತ್ತಮ ಬಿಹಾರಕ್ಕಾಗಿ ಮತ್ತಷ್ಟು ಶ್ರಮಿಸುತ್ತೇವೆ' ಎಂದಿರುವ ಅವರು, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ದೊರೆತಿರುವ ಭಾರಿ ಬಹುಮತವು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಪ್ರತಿಪಾದಿಸಿದ್ದಾರೆ.

'ಅವರು (ಮೋದಿ, ನಿತೀಶ್‌) ನೀಡಿರುವ ಭರವಸೆಗಳನ್ನು ಈಡೇರಿಸುವ ಸಮಯ ಇದಾಗಿದೆ. ಆಶ್ವಾಸನೆಯಂತೆ ಮಹಿಳೆಯರಿಗೆ ₹ 2 ಲಕ್ಷ ನೀಡಬೇಕಿದೆ. ನೀಡದಿದ್ದರೆ, ಮಹಿಳೆಯರ ಪರವಾಗಿ ಹೋರಾಟ ಮಾಡುತ್ತೇವೆ' ಎಂದು ಎಚ್ಚರಿಸಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಮತಗಳ್ಳತನವಾಗಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಒಪ್ಪದ ಪ್ರಶಾಂತ್ ಕಿಶೋರ್‌, 'ಮತಗಳ್ಳತನ ಎಂಬುದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿರುವ ವಿಚಾರ. ವಿರೋಧ ಪಕ್ಷಗಳು ಈ ಬಗ್ಗೆ ಚರ್ಚಿಸಿ, ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆಹೋಗಬೇಕು' ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.