
ಬಿಹಾರ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ
ಕೃಪೆ: ಪಿಟಿಐ
ನವದೆಹಲಿ: ಬೂತ್ ಮಟ್ಟದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದ ಬಿಹಾರದ ಬಿಜೆಪಿ ಮಹಿಳಾ ಕಾರ್ಯಕರ್ತರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಅವರನ್ನುದ್ದೇಶಿಸಿ, 'ಮೊದಲು ಮತ ಚಲಾಯಿಸಿ, ನಂತರ ಉಪಹಾರ ಸೇವಿಸಿ'. ಇದರಿಂದ, ಮತದಾನ ಪ್ರಮಾಣ ಉತ್ತಮವಾಗಿರುತ್ತದೆ ಎಂದು ಕರೆ ನೀಡಿದ್ದಾರೆ.
243 ಕ್ಷೇತ್ರಗಳಿರುವ ಬಿಹಾರದಲ್ಲಿ ಎರಡು ಹಂತಗಳಲ್ಲಿ ಮತದಾನಕ್ಕೆ ದಿನಾಂಕ ನಿಗದಿಯಾಗಿದೆ. 121 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನಾಳೆ (ನವೆಂಬರ್ 6ರಂದು) ಮತದಾನ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತೆಯರನ್ನುದ್ದೇಶಿಸಿ ವರ್ಚುವಲ್ ಆಗಿ ಮಾತನಾಡಿರುವ ಮೋದಿ, ಮತಗಟ್ಟೆಗಳಿಗೆ ಮಹಿಳಾ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರಬೇಕು ಎಂದು ಒತ್ತಾಯಿಸಿದ್ದಾರೆ.
'ಎನ್‌ಡಿಎ ಮೈತ್ರಿಕೂಟವು ಭಾರಿ ಬಹುಮತದಿಂದ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂದು ವಿಶ್ವಾಸದಿಂದ ಹೇಳುತ್ತೇನೆ. ಬಿಹಾರದ ಜನರು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸುವ, ಕಳೆದ 20 ವರ್ಷಗಳ ದಾಖಲೆಯನ್ನು ಮುರಿಯಲಿದ್ದಾರೆ. 'ಜಂಗಲ್ ರಾಜ್'ಗೆ ಸೇರಿದವರು ಅತಿ ದೊಡ್ಡ ಸೋಲನ್ನು ಅನುಭವಿಸಲಿದ್ದಾರೆ' ಎಂದು ಹೇಳಿದ್ದಾರೆ.
ಮಹಿಳಾ ಕಾರ್ಯಕರ್ತರು, 'ನನ್ನ ಮತಗಟ್ಟೆ, ಅತ್ಯಂತ ಬಲಿಷ್ಠ' ಘೋಷದೊಂದಿಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೊಗಳಿರುವ ಮೋದಿ, ಬಿಜೆಪಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮಹಿಳಾ ಮತದಾರರಿಗೆ ಮನವರಿಕೆ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.
ಹಾಗೆಯೇ, ರಾಜ್ಯದಲ್ಲಿ 'ವಿದ್ಯುತ್ ವೆಚ್ಚ ಕಡಿತಗೊಳಿಸಲಾಗಿದೆ. ಹಲವು ನಗರಗಳಲ್ಲಿ ಮೆಟ್ರೊ ಆರಂಭಿಸಲು ಯೋಜನೆ ರೂಪಿಸುತ್ತಿದ್ದೇವೆ' ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು NaMo ಮೊಬೈಲ್ ಆ್ಯಪ್ ಮೂಲಕ, 8 ಲಕ್ಷಕ್ಕೂ ಅಧಿಕ ಕಾರ್ಯಕರ್ತರೊಂದಿಗೆ ಮಾತನಾಡಿದ್ದಾರೆ. ಆ ಪೈಕಿ, ಆಯ್ದ 20 ಜನರಿಂದ ಸಲಹೆಗಳನ್ನು ಸ್ವೀಕರಿಸಿದ್ದಾರೆ. ವರ್ಚುವಲ್ ಕಾರ್ಯಕ್ರಮವನ್ನು ಬಿಜೆಪಿಯು, ಎಲ್‌ಇಡಿ ಪರದೆಗಳ ಮೂಲಕ ಸುಮಾರು 10,000 ಸ್ಥಳಗಳಲ್ಲಿ ಪ್ರಸಾರ ಮಾಡಿದೆ.
ನವೆಂಬರ್ 14ರಂದು ಫಲಿತಾಂಶ
122 ಕ್ಷೇತ್ರಗಳಿಗೆ ನವೆಂಬರ್ 11ರಂದು ಎರಡನೇ ಹಂತದಲ್ಲಿ ಮತದಾನವಾಗಲಿದೆ. ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.