
'ಸಂಕಲ್ಪ ಪತ್ರ' ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಎನ್‌ಡಿಎ ನಾಯಕರು
ಕೃಪೆ: ಪಿಟಿಐ
ಪಟ್ನಾ: ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೇರುವ ಪ್ರಯತ್ನದಲ್ಲಿರುವ ಎನ್‌ಡಿಎ ಮೈತ್ರಿಕೂಟವು ಶುಕ್ರವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಒಂದು ಕೋಟಿ ಉದ್ಯೋಗ ಸೃಷ್ಟಿ ಮತ್ತು ‘ಲಖ್‌ಪತಿ ದೀದಿ’ ಯೋಜನೆಯಡಿ ಒಂದು ಕೋಟಿ ಮಹಿಳೆಯರಿಗೆ ತರಬೇತಿ ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.
ರಾಜ್ಯದ ನಾಲ್ಕು ನಗರಗಳಲ್ಲಿ ಮೆಟ್ರೊ ರೈಲು ಸೇವೆ ಆರಂಭಿಸುವುದು ಮತ್ತು ಏಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುವ ಘೋಷಣೆ ಮಾಡಲಾಗಿದೆ.
ಏಳು ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣ, 10 ಕೈಗಾರಿಕಾ ಪಾರ್ಕ್‌ಗಳ ಅಭಿವೃದ್ಧಿ, ಬಡ ಕುಟುಂಬಗಳ ಮಕ್ಕಳಿಗೆ ಕೆ.ಜಿಯಿಂದ ಪಿ.ಜಿವರೆಗೆ ಉಚಿತ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಕ್ಕಳಿಗೆ ತಿಂಗಳಿಗೆ ₹2000 ನೆರವು ನೀಡುವುದಾಗಿ ಪ್ರಕಟಿಸಿದೆ.
ಪ್ರಣಾಳಿಕೆ ಬಿಡುಗಡೆಗಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಜಿತನ್ ರಾಮ್ ಮಾಂಝಿ, ಚಿರಾಗ್ ಪಾಸ್ವಾನ್, ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಝಾ ಪಾಲ್ಗೊಂಡರು.
‘ಎನ್‌ಡಿಎ ಅಧಿಕಾರಕ್ಕೆ ಬಂದರೆ ಸರ್ಕಾರಿ ಉದ್ಯೋಗಗಳು ಸೇರಿದಂತೆ 1 ಕೋಟಿಗೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು. ಕೌಶಲ ಆಧಾರಿತ ಉದ್ಯೋಗವನ್ನು ಉತ್ತೇಜಿಸಲು ಒತ್ತು ನೀಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲೂ ಮೆಗಾ ಕೌಶಲ ಕೇಂದ್ರ ಸ್ಥಾಪಿಸಲಾಗುವುದು’ ಎಂದು ಸಾಮ್ರಾಟ್ ಚೌಧರಿ ಹೇಳಿದರು.
ಮಹಿಳೆಯರ ಅಭಿವೃದ್ಧಿ ಮತ್ತು ಸ್ವಾವಲಂಬನೆಗಾಗಿ ಮುಖ್ಯಮಂತ್ರಿ ಮಹಿಳಾ ಉದ್ಯೋಗ ಯೋಜನೆಯಡಿ ₹2 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುವುದು. ಎನ್‌ಡಿಎ ಪ್ರಣಾಳಿಕೆಯು ಬಿಹಾರದ ಜನರ ಅಭಿವೃದ್ಧಿಯ ಭರವಸೆಗಳು ಮತ್ತು ಕನಸುಗಳನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.
ಇತರ ಘೋಷಣೆಗಳು...
ಸೀತಾಮಢಿ ಜಿಲ್ಲೆಯಲ್ಲಿರುವ ಸೀತಾ ಮಾತೆಯ ಜನ್ಮಸ್ಥಳವನ್ನು ವಿಶ್ವದರ್ಜೆಯ ಆಧ್ಯಾತ್ಮಿಕ ತಾಣವಾಗಿ ಅಭಿವೃದ್ದಿಪಡಿಸಿ ‘ಸೀತಾಪುರ’ ಎಂದು ನಾಮಕರಣ ಮಾಡುವುದು
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ ನೀಡುತ್ತಿರುವ ವಾರ್ಷಿಕ ಆರ್ಥಿಕ ಸಹಾಯವನ್ನು ₹ 6000ದಿಂದ ₹ 9000ಕ್ಕೆ ಹೆಚ್ಚಿಸುವುದು; ಮೀನುಗಾರರಿಗೆ ನೀಡುವ ವಾರ್ಷಿಕ ಆರ್ಥಿಕ ನೆರವನ್ನು ₹ 4500ದಿಂದ ₹9000ಕ್ಕೆ ಹೆಚ್ಚಿಸುವುದು
ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವುದು
ರಾಜ್ಯದ ಎಲ್ಲಾ ವಲಯಗಳಲ್ಲಿ ‘ಬಿಹಾರ ಸ್ಪೋರ್ಟ್ಸ್ ಸಿಟಿ ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಸ್ಪೋರ್ಟ್ಸ್’ ಕೇಂದ್ರಗಳ ಸ್ಥಾಪನೆ
3600 ಕಿ.ಮೀ ನಷ್ಟು ರೈಲು ಹಳಿಗಳ ಆಧುನೀಕರಣ
‘ಎನ್‌ಡಿಎ ಬದ್ಧತೆಗೆ ಪುರಾವೆ’
ಈ ಪ್ರಣಾಳಿಕೆಯು ರೈತರ ಕಲ್ಯಾಣ ಯುವ ಜನರಿಗೆ ಉದ್ಯೋಗ ಮಹಿಳಾ ಸಬಲೀಕರಣ ಮೂಲಸೌಕರ್ಯ ಅಭಿವೃದ್ಧಿ ಹೊಸ ಉದ್ಯಮಗಳನ್ನು ಸ್ಥಾಪಿಸುವುದು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಬಿಹಾರವನ್ನು ನಿರ್ಮಿಸುವ ನಿಟ್ಟಿನಲ್ಲಿ ಎನ್‌ಡಿಎ ಹೊಂದಿರುವ ಬದ್ಧತೆಗೆ ಒಂದು ಪುರಾವೆಯಾಗಿದೆ. ಎನ್‌ಡಿಎ ಸರ್ಕಾರದಡಿ ಸಮಾಜದ ಎಲ್ಲಾ ವರ್ಗದ ಜನರನ್ನು ಒಳಗೊಳ್ಳುವ ಅಭಿವೃದ್ಧಿಗಾಗಿ ಬಿಹಾರದಲ್ಲಿ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.–ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಸುಳ್ಳಿನ ಸರಮಾಲೆ: ಕಾಂಗ್ರೆಸ್
ಎನ್‌ಡಿಎ ಪ್ರಣಾಳಿಕೆಯನ್ನು ‘ಸುಳ್ಳಿನ ಸರಮಾಲೆ’ ಎಂದು ಕಾಂಗ್ರೆಸ್ ಟೀಕಿಸಿದ್ದು ಪ್ರಣಾಳಿಕ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಪತ್ರಕರ್ತರಿಗೆ ಹೆದರಿ ಕೇವಲ 26 ಸೆಕೆಂಡುಗಳಲ್ಲಿ ಮುಗಿಸಲಾಗಿದೆ ಎಂದು ವ್ಯಂಗ್ಯವಾಡಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಅಶೋಕ್ ಗೆಹಲೋತ್ ‘ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಗಳು ಬಿಟ್ಟು ಬೇರೇನೂ ಇಲ್ಲ. ಎನ್‌ಡಿಎ ನಾಯಕರ ಸುದ್ದಿಗೋಷ್ಠಿ ಕೇವಲ 26 ಸೆಕೆಂಡುಗಳಲ್ಲಿ ಕೊನೆಗೊಂಡಿದೆ. ತಮ್ಮ ಆಡಳಿತದ ಬಗ್ಗೆ ವರದಿಗಾರರು ಕೇಳಬಹುದಾದ ಪ್ರಶ್ನೆಗಳಿಗೆ ಹೆದರಿ ಅವರು ಸುದ್ದಿಗೋಷ್ಠಿ ಬೇಗನೇ ಕೊನೆಗೊಳಿಸಿದ್ದಾರೆ’ ಎಂದು ಹೇಳಿದರು.
ಮುಖ್ಯಮಂತ್ರಿ ನಿತೀಶ್ ಕುಮಾರ್ ಬದಲು ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಕ್ಕೆ ಅವರು ಅಚ್ಚರಿ ವ್ಯಕ್ತಪಡಿಸಿದರು. ‘ಅವರು (ನಿತೀಶ್) ಪ್ರಣಾಳಿಕೆ ಕುರಿತು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲವೇ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.