ನಿತೀಶ್ ಕುಮಾರ್
ಪಟ್ನಾ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ತಲುಪಿಸಲು ಹಳ್ಳಿಗಳಲ್ಲಿ ಕೆಲಸ ಮಾಡುವ 10,000ಕ್ಕೂ ಹೆಚ್ಚು ‘ವಿಕಾಸ್ ಮಿತ್ರ’ರಿಗೆ ಹೊಸ ಟ್ಯಾಬ್‌ಗಳನ್ನು ಖರೀದಿಸಲು ತಲಾ ₹25,000 ಭತ್ಯೆ ನೀಡುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ವಿಕಾಸ್ ಮಿತ್ರ’ರಿಗೆ ನೀಡುವ ಸಾರಿಗೆ ಭತ್ಯೆಯನ್ನು ತಿಂಗಳಿಗೆ ₹1,900ರಿಂದ ₹2,500ಕ್ಕೆ ಹೆಚ್ಚಿಸಲಾಗುವುದು ಮತ್ತು ಸ್ಟೇಷನರಿ ಭತ್ಯೆಯನ್ನು ತಿಂಗಳಿಗೆ ₹900ರಿಂದ ₹1,500ಕ್ಕೆ ಹೆಚ್ಚಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.
‘ದಲಿತರು, ಅಲ್ಪಸಂಖ್ಯಾತರು ಮತ್ತು ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಸೇರಿದ ಮಕ್ಕಳಿಗೆ ಶಾಲಾ ಶಿಕ್ಷಣ ದೊರೆಯುವಂತೆ ಮಾಡುವ 30,000ಕ್ಕೂ ಹೆಚ್ಚು ಶಿಕ್ಷಾ ಸೇವಕರು ಮತ್ತು ತಾಲಿಮಿ ಮರ್ಕಜ್‌ಗಳಿಗೆ ಸ್ಮಾರ್ಟ್‌ಫೋನ್ ಖರೀದಿಸಲು ಸರ್ಕಾರ ತಲಾ ₹10,000 ನೀಡಲು ನಿರ್ಧರಿಸಿದೆ’ ಎಂದೂ ನಿತೀಶ್ ಮಾಹಿತಿ ನೀಡಿದ್ದಾರೆ.
ಬೋಧನಾ ಸಾಮಗ್ರಿಗಳ ಖರೀದಿಗಾಗಿ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ವರ್ಷ ಪಾವತಿಸುವ ಮೊತ್ತವನ್ನು ₹3,405ರಿಂದ ₹6,000ಕ್ಕೆ ಹೆಚ್ಚಿಸುವುದಾಗಿ ಅವರು ತಿಳಿಸಿದ್ದಾರೆ.
‘ನಮ್ಮ ಸರ್ಕಾರ ಸಮಾಜದ ವಂಚಿತ ವರ್ಗಗಳ ಉನ್ನತಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಎಸ್‌ಸಿ ಮತ್ತು ಎಸ್‌ಟಿ ಕಲ್ಯಾಣ ಇಲಾಖೆಯಡಿಯಲ್ಲಿ ಕೆಲಸ ಮಾಡುವ ‘ವಿಕಾಸ್ ಮಿತ್ರ’ರಿಗೆ ಟ್ಯಾಬ್‌ಗಳು ವಿವಿಧ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಡೇಟಾವನ್ನು ಸಂಗ್ರಹಿಸಲು ಸಹಾಯ ಮಾಡುತ್ತವೆ’ ಎಂದು ಅವರು ವಿವರಿಸಿದ್ದಾರೆ.
ಈ ವರ್ಷಾಂತ್ಯದಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕೆಲವೇ ವಾರಗಳಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಸುದೀರ್ಘ ಅವಧಿವರೆಗೆ ಮುಖ್ಯಮಂತ್ರಿಯಾಗಿರುವ ನಿತೀಶ್ ಅವರು ಸತತ ಐದನೇ ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಗುರಿ ಇಟ್ಟುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.