ADVERTISEMENT

ಬಿಹಾರದಲ್ಲಿ ಇಬ್ಬರು ಡಿಸಿಎಂ, ಸುಶೀಲ್ ಕುಮಾರ್‌‌ ಮೋದಿಗಿಲ್ಲ ಅವಕಾಶ?

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2020, 2:27 IST
Last Updated 16 ನವೆಂಬರ್ 2020, 2:27 IST
ಎನ್‌ಡಿಎ ಮೈತ್ರಿಕೂಟ ಬಹುಮತ ಪಡೆದ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದ ಜೆಡಿಯುನ ನಿತೀಶ್‌ ಕುಮಾರ್‌ ಮತ್ತು ಬಿಜೆಪಿಯ ಸುಶೀಲ್‌ ಕುಮಾರ್‌ ಮೋದಿ
ಎನ್‌ಡಿಎ ಮೈತ್ರಿಕೂಟ ಬಹುಮತ ಪಡೆದ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದ ಜೆಡಿಯುನ ನಿತೀಶ್‌ ಕುಮಾರ್‌ ಮತ್ತು ಬಿಜೆಪಿಯ ಸುಶೀಲ್‌ ಕುಮಾರ್‌ ಮೋದಿ    

ಪಟ್ನಾ: ಉಪಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ವಿಚಾರ ಇನ್ನೂ ಸ್ಪಷ್ಟ ಆಗಿಲ್ಲ. 2005ರಿಂದಲೂ (2013–17ರ ಅವಧಿ ಬಿಟ್ಟು) ಸುಶೀಲ್ ಕುಮಾರ್‌ ಮೋದಿ ಅವರು ಉಪಮುಖ್ಯಮಂತ್ರಿ ಆಗಿದ್ದರು. ಈ ಬಾರಿ, ಅವರನ್ನೇ ಆ ಹುದ್ದೆಯಲ್ಲಿ ಮುಂದುವರಿಸುವ ಬಗ್ಗೆ ಒಮ್ಮತ ಏರ್ಪಟ್ಟಿಲ್ಲ.

ಕತಿಹಾರ್‌ ಶಾಸಕ ತಾರಕೇಶ್ವರ ಪ್ರಸಾದ್‌ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ರೇಣು ದೇವಿ ಅವರು ಉಪನಾಯಕಿ ಆಗಲಿದ್ದಾರೆ. ಈ ಇಬ್ಬರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಈ ಇಬ್ಬರೂ ಅತ್ಯಂತ ಹಿಂದುಳಿದ ವರ್ಗಗಳಿಗೆ ಸೇರಿದವರು. ಇವರು ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದಾರೆ.

‘ಎನ್‌ಡಿಎ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವಲ್ಲಿ ಮಹಿಳೆಯರು ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಪಾತ್ರ ಪ್ರಮುಖವಾಗಿದೆ. ಹಾಗಾಗಿ, ಪ್ರಸಾದ್‌ ಮತ್ತು ರೇಣು ದೇವಿ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ದೊರೆಯಬಹುದು’ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ADVERTISEMENT

ಸುಶೀಲ್‌ ಮೋದಿ ಅವರು ಟ್ವೀಟ್‌ ಮಾಡಿ, ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇಲ್ಲ ಎಂಬ ಸುಳಿವು ನೀಡಿದ್ದಾರೆ. ‘40 ವರ್ಷಗಳಲ್ಲಿ ಪಕ್ಷವು ನನಗೆ ಬಹಳಷ್ಟನ್ನು ಕೊಟ್ಟಿದೆ. ಎಲ್ಲ ಜವಾಬ್ದಾರಿಗಳನ್ನು ನಾನು ಪೂರ್ಣಗೊಳಿಸಿದ್ದೇನೆ. ಮುಂದೆಯೂ ಯಾವುದೇ ಕೆಲಸ ವಹಿಸಿದರೆ ಅದನ್ನು ಮಾಡುತ್ತೇನೆ. ಏನೇ ಆದರೂ, ಬಿಜೆಪಿ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವ ನನ್ನ ಅವಕಾಶವನ್ನು ಯಾರೂ ಕಿತ್ತುಕೊಳ್ಳಲಾಗದು’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.